ಬೆಂಗಳೂರು: ಗೃಹಜ್ಯೋತಿ ಯೋಜನೆ ಅಡಿ ಗೃಹಬಳಕೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಿದ್ದು, ಬಾಡಿಗೆ ಮನೆಯಲ್ಲಿ ವಾಸವಿರುವವರು ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸರ್ಕಾರ ಮಾರ್ಗಸೂಚಿಯ ಮೂಲಕ ಗೊಂದಲ ನಿವಾರಿಸಿದೆ.
ಬಾಡಿಗೆದಾರರು ಸೇರಿದಂತೆ ಪ್ರತಿಯೊಬ್ಬರೂ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಒಬ್ಬರಿಗೆ ಒಂದು ಮೀಟರ್ ಗೆ ಮಾತ್ರ ಅವಕಾಶ ನೀಡಿದ್ದು, ಹೆಚ್ಚುವರಿ ಆರ್.ಆರ್. ನಂಬರ್ ಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿದರೆ ಅಕ್ರಮ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಒಬ್ಬರಿಗೆ ಒಂದು ಮೀಟರ್ ಗೆ ಮಾತ್ರ ಅವಕಾಶ ನೀಡಲಾಗಿದೆ.
ಬಾಡಿಗೆ ಮನೆಯಲ್ಲಿ ವಾಸವಾಗಿರುವವರು ಮನೆಯ ಆರ್.ಆರ್. ನಂಬರ್ ನೊಂದಿಗೆ ಆಧಾರ್ ಕಾರ್ಡ್ ಮತ್ತು ಬಾಡಿಗೆ ಒಪ್ಪಂದದ ಕರಾರು ಪತ್ರವನ್ನು ಸೇವಾ ಸಿಂಧು ಆಪ್ ಮೂಲಕ ಅಪ್ಲೋಡ್ ಮಾಡಬೇಕಿದೆ.
ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಬಾಡಿಗೆ ಮನೆಯಲ್ಲಿ ವಾಸವಾಗಿರುವವರು ವಾಸವಿರುವ ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ಆಧಾರ್ ಜೋಡಣೆ ಮಾಡಬೇಕು. ಬಾಡಿಗೆ ಮನೆಯ ಕರಾರು ಪತ್ರವನ್ನು ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು. ಒಂದು ದಾಖಲೆಯನ್ನು ಒಂದು ಮೀಟರ್ ನೊಂದಿಗೆ ಮಾತ್ರ ಜೋಡಣೆ ಮಾಡಲು ಅವಕಾಶವಿದೆ. ಮನೆ ಬದಲಾಯಿಸಿದಾಗ ಹಿಂದಿನ ಮನೆಯ ಮೀಟರ್ ನೊಂದಿಗಿನ ಲಿಂಕ್ ತೆಗೆಸಬೇಕು. ಹೊಸ ಬಾಡಿಗೆ ಮನೆಯ ಆಧಾರ್ ನಂಬರ್ ಮತ್ತು ಆಧಾರ್ ಕಾರ್ಡ್ ಪುನಃ ಜೋಡಣೆ ಮಾಡಬೇಕು ಎಂದು ಹೇಳಲಾಗಿದೆ.