ಆನ್ಲೈನ್ ದಿಗ್ಗಜರ ಕಣ್ಣು ಕೆಂಪಾಗಿಸುವ ನಡೆಯೊಂದರಲ್ಲಿ ’ಡಿಜಿಟಲ್ ತೆರಿಗೆ’ ಪರಿಚಯಿಸಲು ಫ್ರಾನ್ಸ್ ಸರ್ಕಾರ ಮುಂದಾಗಿದೆ. ಟೆಕ್ ಕಂಪನಿಗಳ 2020ರ ವರ್ಷದ ಆದಾಯದ ಮೇಲೆ ಈ ಡಿಜಿಟಲ್ ತೆರಿಗೆ ವಿಧಿಸುವುದಾಗಿ ಫ್ರಾನ್ಸ್ ಹೇಳಿಕೊಂಡಿದೆ.
ಈ ಮೂಲಕ ಗೂಗಲ್, ಅಮೆಜಾನ್, ಫೇಸ್ಬುಕ್, ಆಪಲ್‌ನಂಥ ದಿಗ್ಗಜರಿಗೆ ಹೆಚ್ಚುವರಿ ಹೊರೆ ಬೀಳಲಿದೆ. ಫ್ರಾನ್ಸ್‌ನ ಈ ನಡೆಯ ವಿರುದ್ಧ ಎಚ್ಚರಿಕೆ ಕೊಟ್ಟಿರುವ ಅಮೆರಿಕ, ಇದಕ್ಕೆ ಪ್ರತಿಯಾಗಿ ತಾನೂ ಸಹ ಫ್ರೆಂಚ್ ಆಮದುಗಳ ಮೇಲೆ ಭಾರೀ ತೆರಿಗೆ ವಿಧಿಸುವುದಾಗಿ ಹೇಳಿದೆ.
ಕೊರೊನಾ ವೈರಸ್ ಸಾಂಕ್ರಮಿಕದ ಕಾರಣ ಪಾಶ್ಚಾತ್ಯ ದೇಶಗಳೂ ಸೇರಿದಂತೆ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತ ಉಂಟಾಗಿದ್ದು, ಬಹುತೇಕ ದೇಶಗಳ ವಿತ್ತೀಯ ಇಲಾಖೆಗಳು ತಮ್ಮ ಆರ್ಥ ಶಕ್ತಿಯನ್ನು ಹಳಿ ತಪ್ಪದಂತೆ ನೋಡಿಕೊಳ್ಳಲು ವಿಶಿಷ್ಟ ಕ್ರಮಗಳನ್ನು ತರಲು ಚಿಂತನೆ ನಡೆಸಿವೆ.
ಬೃಹತ್ ಟೆಕ್ ಕಂಪನಿಗಳ ಭಾರೀ ಏರುಗತಿಯನ್ನು ಗಮನದಲ್ಲಿಟ್ಟುಕೊಂಡು, ತೆರಿಗೆ ನಿಯಮಾವಳಿಗಳಲ್ಲಿ ಬದಲಾವಣೆ ತರಲು ಓಇಸಿಡಿ ಬಣದ ದೇಶಗಳು ಇದೇ ಮೇನಲ್ಲಿ ಮಾತುಕತೆಗೆ ಮುಂದಾಗಿದ್ದವು.