ಬೆಂಗಳೂರು: ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪನಿ ದೇವನಹಳ್ಳಿಯ ಐಟಿಐಆರ್ ವಲಯದಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದು, ಈ ಘಟಕಕ್ಕೆ ಪೂರಕವಾಗಿ ತುಮಕೂರಿನಲ್ಲಿ ಮತ್ತೊಂದು ಘಟಕ ಸ್ಥಾಪಿಸಲು ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಫಾಕ್ಸ್ ಕಾನ್ ಕಂಪನಿ ಸಿಇಒ ಬ್ರ್ಯಾಂಡ್ ಚೆಂಗ್ ನೇತೃತ್ವದ ನಿಯೋಗ ಸಭೆ ನಡೆಸಿದೆ. ಈ ಸಂದರ್ಭದಲ್ಲಿ ಕೈಗಾರಿಕೆಗೆ ರಾಜ್ಯದಲ್ಲಿ ಉತ್ತಮ ಪರಿಸರವಿದೆ ಎಂದು ಸಿಎಂ ತಿಳಿಸಿದ್ದಾರೆ.
ತುಮಕೂರಿನಲ್ಲಿ ಫಾಕ್ಸ್ ಕಾನ್ ಕಂಪನಿಯ ಮತ್ತೊಂದು ಘಟಕ ಸ್ಥಾಪಿಸಲು ಆಸಕ್ತಿ ತೋರಲಾಗಿದೆ. ಫಾಕ್ಸ್ ಕಾನ್ ಅಂಗ ಸಂಸ್ಥೆಯಾದ ಫಾಕ್ಸ್ ಕಾನ್ ಇಂಡಸ್ಟ್ರಿಯಲ್ ಇಂಟರ್ನೆಟ್ ವತಿಯಿಂದ ತುಮಕೂರು ಸಮೀಪದ ಜಪಾನೀಸ್ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನೂತನ ಘಟಕ ಆರಂಭಿಸಲಿದ್ದು, 100 ಎಕರೆ ಪ್ರದೇಶದಲ್ಲಿ ಘಟಕ ಸ್ಥಾಪನೆಗೆ 8800 ಕೋಟಿ ರೂ. ಹೂಡಿಕೆ ಮಾಡಲಿದೆ. 14 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ.
ಫೋನ್ ಸ್ಕ್ರೀನ್, ಹೊರ ಕವಚ, ಇತರೆ ಯಾಂತ್ರಿಕೃತ ಬಿಡಿ ಭಾಗಗಳನ್ನು ಘಟಕ ತಯಾರಿಸಲಿದೆ. ದೇವನಹಳ್ಳಿ ಸಮೀಪದ ಘಟಕ ಎಂಡ್ ಅಸೆಂಬ್ಲಿ ಘಟಕವಾಗಿದೆ.