ಬೆಂಗಳೂರು: ದೇಶದ ಪ್ರತಿ ಪಂಚಾಯತಿಯಲ್ಲೂ ಸಹಕಾರ ಸಮಿತಿ ರಚಿಸಲಾಗುತ್ತದೆ. ಮೂರು ವರ್ಷದೊಳಗೆ ಹೊಸದಾಗಿ ಎರಡು ಲಕ್ಷ ಸಹಕಾರ ಸಮಿತಿ ರಚಿಸುತ್ತೇವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸಹಕಾರಿ ಸಮಾವೇಶದಲ್ಲಿ ಅವರು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರಾಜ್ಯ ವೇಗವಾಗಿ ಮುನ್ನುಗುತ್ತಿದೆ. 1905ರಲ್ಲಿ ಮೊದಲ ಬಾರಿಗೆ ಗದಗದಲ್ಲಿ ಸಹಕಾರ ಸಂಘ ಸ್ಥಾಪನೆ ಆಯಿತು. ಕೇಂದ್ರದಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಸಹಕಾರಿ ಮಂತ್ರಾಲಯ ಮಾಡಿದರು ಎಂದರು.
ಸಹಕಾರಿ ಇಲಾಖೆಯಲ್ಲಿ ಪಾರದರ್ಶಕತೆ ತರಲು ಕ್ರಮ ಕೈಗೊಳ್ಳಲಾಗಿದೆ. ದೇಶದ ಪ್ರತಿ ಪಂಚಾಯಿತಿಯಲ್ಲಿ ಸಹಕಾರ ಸಮಿತಿ ರಚಿಸಲಾಗುತ್ತದೆ. ಮೂರು ವರ್ಷದೊಳಗೆ ಹೊಸದಾಗಿ ಎರಡು ಲಕ್ಷ ಸಹಕಾರ ಸಮಿತಿ ರಚಿಸುತ್ತೇವೆ. ಸಹಕಾರಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಯೋಜನೆ ಇದೆ. ಸಹಕಾರಿ ನೀತಿಯನ್ನು ಸ್ಥಾಪಿಸಲು ಈಗಾಗಲೇ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.