ದೇಶದಲ್ಲಿ ಕೊರೊನಾ ವೈರಸ್ ಹೆಚ್ಚಾಗ್ತಿದ್ದಂತೆ ಕೆಲವು ಕಡೆ ಲಾಕ್ ಡೌನ್ ವಿಧಿಸಲಾಗಿದೆ. ಈ ಮಧ್ಯೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲಾಕ್ ಡೌನ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ದೇಶದಾದ್ಯಂತ ಲಾಕ್‌ಡೌನ್ ವಿಧಿಸುವ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ಕಳೆದ ವರ್ಷದಂತೆ ಇಡೀ ದೇಶವನ್ನು ಈ ವರ್ಷವೂ ಲಾಕ್ ಮಾಡಲಾಗುವುದಿಲ್ಲ. ಬದಲಾಗಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸ್ಥಳೀಯ ಮಟ್ಟದಲ್ಲಿ ಕೆಲವು ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದವರು ಹೇಳಿದ್ದಾರೆ. ಕೋವಿಡ್ -19 ಹರಡುವುದನ್ನು ತಡೆಗಟ್ಟಲು ವೈರಸ್ ಪತ್ತೆ, ಚಿಕಿತ್ಸೆ, ವ್ಯಾಕ್ಸಿನೇಷನ್ ಮತ್ತು ಎಚ್ಚರಿಕೆ ಸೇರಿದಂತೆ ಐದು ಪ್ರಮುಖ ವಿಷ್ಯಗಳ ಬಗ್ಗೆ ಹಣಕಾಸು ಸಚಿವರು ಪರಿಶೀಲಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ಟ್ವಿಟ್ಟರ್ ನಲ್ಲಿ ಹೇಳಿದೆ.
ಎರಡನೇ ಬಾರಿ ದೇಶದಲ್ಲಿ ಸೋಂಕು ಶೀಘ್ರವಾಗಿ ಹರಡಿದರೂ,ದೊಡ್ಡ ಪ್ರಮಾಣದಲ್ಲಿ ಲಾಕ್‌ಡೌನ್ ಹೇರುವುದಿಲ್ಲ. ಆರ್ಥಿಕತೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಸರ್ಕಾರ ಬಯಸುವುದಿಲ್ಲ. ಕೋವಿಡ್ ರೋಗಿಗಳು ಅಥವಾ ಕುಟುಂಬವನ್ನು ಸ್ಥಳೀಯ ಮಟ್ಟದಲ್ಲಿ ಪ್ರತ್ಯೇಕವಾಗಿಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಟ್ವೀಟ್ ಮಾಡಲಾಗಿದೆ.