ನವದೆಹಲಿ: ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆಯಾಗುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ.
ದರ ಇಳಿಕೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಯಾವುದೇ ಅವಕಾಶವಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.
ಈ ಮೊದಲು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಬಾಂಡ್ ಗಳನ್ನು ನೀಡಿತ್ತು, ಅವರು ಇಂಧನದ ಚಿಲ್ಲರೆ ಮಾರಾಟ ಬೆಲೆ ಮತ್ತು ವೆಚ್ಚದಲ್ಲಿನ ವ್ಯತ್ಯಾಸವನ್ನು ತೆರವುಗೊಳಿಸಬಹುದು. ಈ ತೈಲ ಬಾಂಡ್‌ಗಳ ಬಡ್ಡಿಯನ್ನು ಈಗ ಪಾವತಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ತೈಲ ಬಾಂಡ್ ಗಳಲ್ಲಿ ಕಳೆದ 5 ವರ್ಷಗಳಲ್ಲಿ ಸರ್ಕಾರವು 60,000 ಕೋಟಿ ರೂಪಾಯಿಗಳಷ್ಟು ಬಡ್ಡಿಯನ್ನು ಪಾವತಿಸಿದೆ. ಇನ್ನೂ 1.3 ಲಕ್ಷ ಕೋಟಿಗಳಷ್ಟು ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.
ಯುಪಿಎ ಸರ್ಕಾರ 1.44 ಲಕ್ಷ ಕೋಟಿ ತೈಲ ಬಾಂಡ್ ಗಳನ್ನು ನೀಡುವ ಮೂಲಕ ಇಂಧನ ಬೆಲೆಯನ್ನು ಕಡಿಮೆ ಮಾಡಿದೆ. ಹಿಂದಿನ ಯುಪಿಎ ಸರ್ಕಾರ ಮಾಡಿದ ಕುತಂತ್ರದಿಂದ ನಾವು ಕಡಿಮೆ ಮಾಡಲು ಸಾಧ್ಯವಿಲ್ಲ. ತೈಲ ಬಾಂಡ್ ಗಳಿಂದಾಗಿ, ನಮ್ಮ ಸರ್ಕಾರಕ್ಕೆ ಹೊರೆ ಹೆಚ್ಚಿದೆ. ಅದಕ್ಕಾಗಿಯೇ ನಾವು ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯುಪಿಎ ಸರ್ಕಾರ ಕೊಟ್ಟಿದ್ದ ತೈಲ ಬಾಂಡ್ ಗಳಿಗೆ ಬಡ್ಡಿ ಪಾವತಿಸುವುದರಿಂದ ಬೊಕ್ಕಸಕ್ಕೆ ಹೊರೆಯಾಗಿದೆ. ಕಳೆದ 5 ವರ್ಷಗಳಲ್ಲಿ ಸರ್ಕಾರವು 62,000 ಕೋಟಿ ರೂಪಾಯಿಗಳಷ್ಟು ಬಡ್ಡಿಯನ್ನು ತೈಲ ಬಾಂಡ್‌ಗಳ ಮೇಲೆ ಪಾವತಿಸಿದೆ. ನಾವು ಇನ್ನೂ 37,000 ಕೋಟಿ ರೂಪಾಯಿಗಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಬಡ್ಡಿ ಪಾವತಿಯ ಹೊರತಾಗಿಯೂ, 2026 ರ ವೇಳೆಗೆ 1.3 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತದ ಬಾಕಿ ಉಳಿದಿದೆ. ತೈಲ ಬಾಂಡ್ ಗಳ ಹೊರೆ ಇಲ್ಲದಿದ್ದರೆ, ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಸ್ಥಿತಿಯಲ್ಲಿರುತ್ತಿದ್ದೆವು ಎಂದು ಅವರು ತಿಳಿಸಿದ್ದಾರೆ.