ತುರ್ತು ಪರಿಸ್ಥಿತಿಯಲ್ಲಿ ಚಿನ್ನದ ಮೇಲಿನ ಸಾಲವು ಅತ್ಯುತ್ತಮ ಆಯ್ಕೆ ಎಂದ್ರೆ ತಪ್ಪಾಗಲಾರದು. ಚಿನ್ನದ ಸಾಲ ಪಡೆಯುವುದು ಸುಲಭ. ಚಿನ್ನದ ಸಾಲಕ್ಕೆ ಉತ್ತಮ ಕ್ರೆಡಿಟ್ ಸ್ಕೋರ್ ಅಥವಾ ಯಾವುದೇ ಆದಾಯದ ಪುರಾವೆ ಬೇಕಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಚಿನ್ನದ ಸಾಲವನ್ನು ಪಡೆಯಬಹುದು. ಸರ್ಕಾರಿ, ಖಾಸಗಿ ಬ್ಯಾಂಕುಗಳ ಜೊತೆ ಬ್ಯಾಂಕೇತರ ಹಣಕಾಸು ಕಂಪನಿಗಳು ಚಿನ್ನದ ಸಾಲವನ್ನು ನೀಡುತ್ತವೆ.
ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಹಣ ಪಡೆಯಲು ಈ ಸಾಲವು ಅಗ್ಗದ ಮತ್ತು ಹೆಚ್ಚು ಸಮಸ್ಯೆಯಿಲ್ಲದ ಆಯ್ಕೆಯಾಗಿದೆ. ಚಿನ್ನದ ಮೇಲೆ ಸಾಲ ನೀಡಲು ಹೆಚ್ಚಿನ ಸಮಯ ತೆಗೆದುಕೊಳ್ಳಲಾಗುವುದಿಲ್ಲ. ಸಾಮಾನ್ಯವಾಗಿ ಚಿನ್ನದ ಮೇಲಿನ ಸಾಲವನ್ನು 2 ವರ್ಷಗಳವರೆಗೆ ನೀಡಲಾಗುತ್ತದೆ. ಈ ಅವಧಿ ನಂತ್ರ ನೀವು ಸಾಲವನ್ನು ನವೀಕರಿಸಬಹುದು.
ಚಿನ್ನದ ಮೇಲೆ ಸಾಲ ಪಡೆಯಲು ನೀವು ಚಿನ್ನದ ಆಭರಣ, ಬಾರ್, ನಾಣ್ಯಗಳಲ್ಲಿ ಒಂದನ್ನು ನೀಡಬೇಕು. ಬ್ಯಾಂಕುಗಳು ಚಿನ್ನದ ಮೌಲ್ಯದ ಶೇಕಡಾ 80ರವರೆಗೆ ಸಾಲವಾಗಿ ನೀಡುತ್ತವೆ. ಚಿನ್ನದ ಮೇಲೆ ಸಾಲ ಪಡೆದ ಸಂದರ್ಭದಲ್ಲಿ ಸುಲಭವಾಗಿ ಮರುಪಾವತಿ ಆಯ್ಕೆಗಳನ್ನು ಪಡೆಯುತ್ತೀರಿ.
ಚಿನ್ನದ ಸಾಲವನ್ನು ಪಡೆಯಲು ಉತ್ತಮ ಕ್ರೆಡಿಟ್ ಇತಿಹಾಸ ಹೊಂದಿರುವ ಅಗತ್ಯವಿಲ್ಲ. ಉತ್ತಮ ಕ್ರೆಡಿಟ್ ಇತಿಹಾಸವನ್ನು ಹೊಂದಿದ್ದರೆ ಚಿನ್ನದ ಸಾಲವನ್ನು ಅಗ್ಗದ ದರದಲ್ಲಿ ಪಡೆಯಬಹುದು. ಚಿನ್ನದ ಸಾಲ ಪಡೆಯಲು ಬೇಕಾದ ದಾಖಲೆಗಳು ತೀರಾ ಕಡಿಮೆ. ಈ ಸಾಲವನ್ನು ಪಡೆಯಲು ಗುರುತಿನ ಮತ್ತು ವಿಳಾಸ ಪುರಾವೆಗಳನ್ನು ನೀಡಬೇಕಾಗುತ್ತದೆ.
ಚಿನ್ನದ ಮೇಲಿನ ಸಾಲವು ಸುರಕ್ಷಿತ ಸಾಲವಾಗಿರುವುದರಿಂದ ಅದರ ಮೇಲಿನ ಬಡ್ಡಿದರವು ವೈಯಕ್ತಿಕ ಸಾಲಕ್ಕಿಂತ ಕಡಿಮೆಯಿರುತ್ತದೆ. ಸದ್ಯ ಉದ್ಯೋಗ ವಿವರ ಮತ್ತು ಕ್ರೆಡಿಟ್ ಸ್ಕೋರ್‌ಗೆ ಅನುಗುಣವಾಗಿ ವೈಯಕ್ತಿಕ ಸಾಲಗಳು ಶೇಕಡಾ 10-15ರ ಬಡ್ಡಿದರಗಳಲ್ಲಿ ಲಭ್ಯವಿದೆ. ಆದರೆ ಚಿನ್ನದ ಸಾಲವನ್ನು ಶೇಕಡಾ 7 ರಿಂದ ನೀಡಲಾಗುತ್ತದೆ. ಚಿನ್ನದ ಸಾಲಗಳಿಗೆ ಕಡಿಮೆ ಬಡ್ಡಿದರವನ್ನು ವಿಧಿಸುವ ಅಗ್ರ ಐದು ಬ್ಯಾಂಕುಗಳು ಇಲ್ಲಿವೆ.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಶೇಕಡಾ 7ರ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ನೀಡುತ್ತದೆ. ಬ್ಯಾಂಕ್ ಆಫ್ ಇಂಡಿಯಾ ಬಡ್ಡಿ ದರ ಶೇಕಡಾ 7.35ರಷ್ಟಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿ ದರ ಶೇಕಡಾ 7.5ರಷ್ಟಿದೆ. ಕೆನರಾ ಬ್ಯಾಂಕ್ ಬಡ್ಡಿ ದರ ಶೇಕಡಾ 7.65ರಷ್ಟಿದೆ. ಯೂನಿಯನ್ ಬ್ಯಾಂಕ್ ಚಿನ್ನದ ಮೇಲೆ ಶೇಕಡಾ 8.2ರ ಬಡ್ಡಿ ವಿಧಿಸುತ್ತದೆ.