ಸಂಶಯಾಸ್ಪದ ಹಣ ವರ್ಗಾವಣೆ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುವ ಹಣಕಾಸು ಗುಪ್ತಚರ ಘಟಕ (ಎಫ್ಐಯು) ಕ್ಕೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನಿರ್ಧರಿಸಿದೆ.
ಕೇಂದ್ರ ಹಣಕಾಸು ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಫ್ಐಯುಗೆ ಹೆಚ್ಚಿನ ಅಧಿಕಾರ ನೀಡುವುದರಿಂದ ಹಣಕಾಸು ಅವ್ಯವಹಾರಗಳ ನಿಯಂತ್ರಣ ಹಾಗೂ ತನಿಖೆಗೆ ಸಹಕಾರಿಯಾಗಲಿದೆ. ಅಲ್ಲದೆ, ತೆರಿಗೆ ವಂಚಕರ ಪತ್ತೆಯನ್ನೂ ಮಾಡಬಹುದಾಗಿದೆ.
ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳು ಇನ್ನು ಮುಂದೆ ಪ್ರತಿ ತಿಂಗಳೂ ತಮ್ಮ ಬ್ಯಾಂಕಿನಲ್ಲಾಗುವ ನಗದು ವ್ಯವಹಾರದ ವರದಿ (ಸಿಟಿಆರ್) ಯನ್ನು ಎಫ್ಐಯುಗೆ ಸಲ್ಲಿಕೆ ಮಾಡಬೇಕು.
ಬ್ಯಾಂಕಿನಲ್ಲಿ ಯಾವೆಲ್ಲ ಗ್ರಾಹಕರು 10 ಲಕ್ಷ ರೂ. ಅಥವಾ ಅದಕ್ಕೆ ಸರಿಸಮಾನವಾದ ವಿದೇಶಿ ನಗದನ್ನು ವ್ಯವಹಾರಕ್ಕೆ ಬಳಸುತ್ತಾರೆ ಅಂತಹ ಸಿಟಿಆರ್ ಗಳನ್ನು ಮಾತ್ರ ಸಲ್ಲಿಸಬೇಕು.
ಹಣಕಾಸು ವ್ಯವಹಾರ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಅನ್ವಯ ಎಫ್ಐಯು ಕಾರ್ಯನಿರ್ವಹಿಸಲಿದ್ದು, ಬ್ಯಾಂಕುಗಳು ತಾವಾಗಿಯೇ ವರದಿ ಸಲ್ಲಿಸಬೇಕಿರುತ್ತದೆ. ಇಲ್ಲದಿದ್ದರೆ, ಸಾಧಾರಣವಾಗಿ ಇಂತಹ ಬ್ಯಾಂಕ್ ಖಾತೆಗಳ ಮೇಲೆ ಕಣ್ಣಿಟ್ಟಿರುವ ಎಫ್ಐಯು, ತೆರಿಗೆ ಇಲಾಖೆ ಮೂಲಕ ನೋಟಿಸ್ ಜಾರಿಗೆ ಶಿಫಾರಸು ಮಾಡಬಹುದಾಗಿರುತ್ತದೆ.
ಇಡೀ ಖಾತೆ ಅಥವಾ ಖಾತೆದಾರರ ವಿವರವನ್ನೇನೂ ಸಲ್ಲಿಸಬೇಕಿರುವುದಿಲ್ಲ. ಬದಲಿಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ಕಾರ್ಡ್ ನಂಬರ್) ಹಾಗೂ ವ್ಯವಹಾರದ ರಶೀದಿ ಸಲ್ಲಿಸಿದರೆ ಸಾಕು. ಮುಂದಿನ ಪ್ರಕ್ರಿಯೆಗಳನ್ನು ಎಫ್ಐಯು ನೋಡಿಕೊಳ್ಳಲಿದ್ದು, ಹಣಕಾಸು ಅವ್ಯವಹಾರ ತಡೆ ಮತ್ತು ತನಿಖೆ ಮಾಡಲಿದೆ.