ಏಪ್ರಿಲ್ 1 ರಿಂದ ಹಣಕಾಸು ವರ್ಷ ಆರಂಭವಾಗಲಿದ್ದು ಇದರೊಂದಿಗೆ ಕೆಲವು ನಿಯಮಗಳು ಬದಲಾಗಲಿವೆ. ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆಗೆ ಕಾರಣವಾಗಲಿರುವ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಆಧಾರ್ –ಪಾನ್ ಕಾರ್ಡ್ ಜೋಡಣೆ
ಆಧಾರ್ ಕಾರ್ಡ್, ಪಾನ್ ಕಾರ್ಡ್ ಜೋಡಣೆಗೆ ಇಂದೇ ಕೊನೆಯ ದಿನವಾಗಿದೆ. ನೀವಿನ್ನು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ನಾಳೆಯಿಂದ 1000 ದಂಡ ಕಟ್ಟಬೇಕಿದೆ .
ಹೊಸ ವೇತನ ನಿಯಮ-ಕೈಗೆ ಕಡಿಮೆ ಸ್ಯಾಲರಿ
ಏಪ್ರಿಲ್ 1 ರಿಂದ ಹೊಸ ವೇತನ ನೀತಿ ಜಾರಿಯಾಗಲಿದೆ. ನೌಕರರ ಕೈಗೆ ಸಿಗುವ ವೇತನ ಕಡಿಮೆಯಾಗಲಿದೆ. ಮೂಲವೇತನ ಶೇಕಡ 50 ಕ್ಕಿಂತ ಹೆಚ್ಚಿರಬೇಕೆಂಬ ಕಾರಣಕ್ಕೆ ಟೇಕ್ ಹೋಮ್ ಸ್ಯಾಲರಿ ಕಡಿಮೆಯಾಗಲಿದೆ.
ಟಿಡಿಎಸ್ ದುಪ್ಪಟ್ಟು ಏರಿಕೆ
ತೆರಿಗೆ ಪಾವತಿಸದ ನೌಕರರು ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ ಬಡ್ಡಿಗೆ ವಿಧಿಸುತ್ತಿದ್ದ ಟಿಡಿಎಸ್ ದುಪ್ಪಟ್ಟು ಏರಿಕೆಯಾಗುತ್ತದೆ.
ವಿಲೀನಗೊಂಡ ಬ್ಯಾಂಕ್ ಚೆಕ್, ಪಾಸ್ ಬುಕ್ ಅಮಾನ್ಯ
ವಿಲೀನಗೊಂಡ ಬ್ಯಾಂಕುಗಳ ಚೆಕ್, ಪಾಸ್ ಬುಕ್ ಗಳು ಅಮಾನ್ಯವಾಗಲಿವೆ. ಕಾರ್ಪೊರೇಷನ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್, ವಿಜಯ ಬ್ಯಾಂಕ್, ಯುನಿಟೆಡ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ದೇನಾ ಬ್ಯಾಂಕ್ ಚೆಕ್ ನಡೆಯುವುದಿಲ್ಲ.
ಭವಿಷ್ಯನಿಧಿಗೆ ತೆರಿಗೆ
ಭವಿಷ್ಯ ನಿಧಿಯಲ್ಲಿ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಅಧಿಕ ಹೂಡಿಕೆ ಮಾಡಿದ್ದರೆ ಅದಕ್ಕೆ ಲಭಿಸುವ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.
ನೆಟ್ ಬ್ಯಾಂಕಿಂಗ್ ನಲ್ಲೂ ಬದಲಾವಣೆ
ಇಂಟರ್ನೆಟ್, ಯುಪಿಐ ಮೂಲಕ ಆಟೋ ಪೇಮೆಂಟ್ ಗೆ ದೃಢೀಕರಣ ಪಡೆದುಕೊಳ್ಳಬೇಕಿದೆ. 5 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಪಾವತಿ ಸಂದರ್ಭದಲ್ಲಿ ಒಟಿಪಿ ಮೂಲಕ ಗ್ರಾಹಕರ ದೃಢೀಕರಣವಾದ ನಂತರ ಹಣ ಪಾವತಿಯಾಗಲಿದೆ.