
ಬೆಂಗಳೂರು: ಕೇಂದ್ರ ರಸಗೊಬ್ಬರ ಇಲಾಖೆಯಿಂದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಗೊಬ್ಬರ ಬೆಲೆ ಏರಿಕೆಯಿಂದ ರೈತರು ಆತಂಕದಲ್ಲಿದ್ದರು. ಅವರ ಆತಂಕವನ್ನು ದೂರ ಮಾಡಲಾಗಿದ್ದು, ರೈತರಿಗೆ 14.775 ಕೋಟಿ ರೂಪಾಯಿ ಹೆಚ್ಚುವರಿ ಸಬ್ಸಿಡಿ ನೀಡಲಾಗಿದೆ.
ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿ ಯೋಜನೆಯಡಿ ಪರಿಷ್ಕೃತ ಆದೇಶ ಹೊರಡಿಸಲಾಗಿದ್ದು, ರಸಗೊಬ್ಬರದಲ್ಲಿ ಬಳಕೆ ಮಾಡುವ ಪ್ರತಿ ಟನ್ ನೈಟ್ರೋಜನ್ ಗೆ 18,789 ರೂಪಾಯಿ, ಫಾಸ್ಪೆಟ್ ಗೆ 45,323 ರೂ., ಪೊಟ್ಯಾಷ್ ಗೆ 10,116 ರೂ., ಸಲ್ಪರ್ ಗೆ 2374 ರೂಪಾಯಿ ಸಬ್ಸಿಡಿ ಸಿಗಲಿದೆ.
ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿ ಯೋಜನೆಯಡಿ 22 ನಮೂನೆಯ ಗೊಬ್ಬರಗಳಿದ್ದು, ಇವುಗಳ ಪಟ್ಟಿಗೆ ಹೊಸದಾಗಿ NPK 8 -21 -21, NPK 9 -24 -24 ರಸಗೊಬ್ಬರಗಳನ್ನು ಸೇರ್ಪಡೆ ಮಾಡಲಾಗಿದೆ. ಪರಿಷ್ಕೃತ ಸಬ್ಸಿಡಿ ದರಗಳು ಮುಂಗಾರು ಹಂಗಾಮಿನವರೆಗೆ ಜಾರಿಯಲ್ಲಿರುತ್ತವೆ.
ಪ್ರತಿವರ್ಷ ಕೇಂದ್ರ ಸರ್ಕಾರ 80 ಸಾವಿರ ಕೋಟಿ ರೂಪಾಯಿಯ ಸಬ್ಸಿಡಿ ನೀಡುತ್ತದೆ. ಈಗ ಹೆಚ್ಚುವರಿಯಾಗಿ 14,775 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದು, ದೇಶದ 9.57 ಕೋಟಿಗೂ ಹೆಚ್ಚಿನ ರೈತರಿಗೆ ಪ್ರಯೋಜನವಾಗಲಿದೆ. ಡಿಎಪಿ ಮತ್ತು ಪಿ -ಕೆ ರಸಗೊಬ್ಬರ ಸಬ್ಸಿಡಿಯನ್ನು ಒಂದು ಚೀಲಕ್ಕೆ 511 ರೂಪಾಯಿಯಿಂದ 1211 ರೂಪಾಯಿಗೆ ಅಂದರೆ ಶೇಕಡ 140 ರಷ್ಟು ಹೆಚ್ಚಳ ಮಾಡಲಾಗಿದೆ.