ಧಾರವಾಡ: ಸಂಗ್ರಹವಿರುವ ಡಿಎಪಿ ರಸಗೊಬ್ಬರ ಪ್ರತಿ ಚೀಲಕ್ಜೆ 1200 ರೂ. ನಿಗದಿಸಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಕಾಪು ದಾಸ್ತಾನು ಅಡಿ ಕೆ.ಎಸ್.ಸಿ.ಎಮ್.ಎಫ್ ದಲ್ಲಿ ಸಂಗ್ರಹವಿದ್ದ 1960 ಟನ್ ಡಿ.ಎ.ಪಿ. ಗೊಬ್ಬರ ಪ್ರತಿ ಚೀಲಕ್ಕೆ 1450 ರೂ.ಗಳ ದರ ನಿಗದಿಪಡಿಸಲಾಗಿತ್ತು.
ಈ ಕುರಿತು ಧಾರವಾಡ ಜಿಲ್ಲಾಡಳಿತ ಪ್ರಸ್ತಾವನೆಯನ್ನು ಸಲ್ಲಿಸಿ, ರೈತರ ಅನುಕೂಲಕ್ಕಾಗಿ ಈಗಾಗಲೇ ಕಾಪು ದಾಸ್ತಾನುವಿರುವ ಡಿಎಪಿ ಗೊಬ್ಬರ ದರವನ್ನು 1200 ರೂ. ಗೆ ಮರು ನಿಗದಿಗೊಳಿಸಲು ಪತ್ರ ಕಳಿಸಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ದರ ಇಳಿಕೆ ಕುರಿತಾಗಿ ಪ್ರಯತ್ನ ನಡೆಸಿದ್ದರು. ಈಗಾಗಲೇ ಕಾಪು ದಾಸ್ತಾನು ಇರುವ ಡಿಎಪಿ ಗೊಬ್ಬರಕ್ಕೆ 1200 ರೂ. ನಿಗದಿಗೊಳಿಸಿದ್ದು, ಹೊಸ ದರದಲ್ಲಿ ಗೊಬ್ಬರ ಮಾರಾಟ ಮಾಡಲು ರಾಜ್ಯ ಸರ್ಕಾರದಿಂದ ಅನುಮತಿ ನೀಡಿದ್ದಾರೆ.
ಇದರಿಂದ ಇಡೀ ರಾಜ್ಯದ ರೈತರಿಗೆ ಉಪಯುಕ್ತವಾಗುತ್ತದೆ. ಧಾರವಾಡ ಜಿಲ್ಲೆಯಲ್ಲೂ ಗೊಬ್ಬರ ಮಾರಾಟ ಮಳಿಗೆ, ಖಾಸಗಿ ವಿತರಕರು ಎಲ್ಲ ಡಿಎಪಿ ಗೊಬ್ಬರವನ್ನು ಪ್ರತಿ ಚೀಲಕ್ಕೆ 1200 ರೂ. ಮಾರಾಟ ಮಾಡುವಂತೆ ಜಿಲ್ಲಾಡಳಿತವು ಕೃಷಿ ಇಲಾಖೆ ಮೂಲಕ ಕ್ರಮ ಕೈಗೊಂಡಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.