ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆಗೆ ತಡೆ ನೀಡಿದ್ದರೂ ಕಂಪನಿಗಳು ತಲೆಕೆಡಿಸಿಕೊಳ್ಳದೆ ದುಬಾರಿ ದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡಲು ಮುಂದಾಗಿವೆ.
ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಎಂಸಿಎಫ್ ರಸಗೊಬ್ಬರ 400 ರಿಂದ 600 ರೂಪಾಯಿ ಹೆಚ್ಚಳವಾಗಿದೆ. 500 ರೂ. ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ ಶಾಕ್ ಆಗಿದೆ. ಅಂದ ಹಾಗೆ, ಭತ್ತಕ್ಕಿಂತ ರಸಗೊಬ್ಬರ ಬೆಲೆಯೇ ಜಾಸ್ತಿಯಾಗಿದೆ, 75 ಕೆಜಿ ಭತ್ತದ 1 ಚೀಲಕ್ಕೆ 1300 ರುಪಾಯಿ ದರ ಇದೆ. ಆದರೆ, 50 ಕೆಜಿ ರಸಗೊಬ್ಬರಕ್ಕೆ 1400 ರೂ.ನಿಂದ 1700 ರೂಪಾಯಿ ಬೆಲೆ ಇದೆ. ಭತ್ತಕ್ಕಿಂತ ಗೊಬ್ಬರ ದರವೇ ಜಾಸ್ತಿ ಆಗಿದೆ ಎಂದು ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗಷ್ಟೇ ರಸಗೊಬ್ಬರ ಏರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಕಂಪನಿಗಳೊಂದಿಗೆ ಸಭೆ ನಡೆಸಿ ಬೆಲೆ ಹೆಚ್ಚಳ ಮಾಡದಂತೆ ಸೂಚನೆ ನೀಡಿದ್ದರು. ರಾಜ್ಯ ಸಚಿವ ಬಿ.ಸಿ. ಪಾಟೀಲ್ ಅವರು ಹಳೆದರದಲ್ಲಿಯೇ ಗೊಬ್ಬರ ಮಾರಾಟಕ್ಕೆ ಸೂಚನೆ ನೀಡಿದ್ದರು.
ಆದರೆ, ಕಾರಟಗಿ ಗೊಬ್ಬರ ವ್ಯಾಪಾರಿಗಳಿಗೆ ಮಂಗಳೂರಿನ ಎಂಸಿಎಫ್ ಕಂಪನಿಯಿಂದ ಪೂರೈಕೆ ಮಾಡಲಾಗಿರುವ ಗೊಬ್ಬರಗಳ ಬೆಲೆ ಏರಿಕೆಯಾಗಿದೆ. 910 ರೂಪಾಯಿಗೆ ಸಿಗುತ್ತಿದ್ದ ಜೈಕಿಸಾನ್ ಮಂಗಳ 50 ಕೆಜಿ ಗೊಬ್ಬರ ದರ 1400 ರೂಪಾಯಿಗೆ ಹೆಚ್ಚಾಗಿ ಸುಮಾರು 600 ರೂಪಾಯಿಯಷ್ಟು ಏರಿಕೆಯಾಗಿದೆ.