ಧಾರವಾಡ: ಮಳೆಗಾಲ ಆರಂಭವಾಗಿದ್ದು, ಮಾನ್ಸೂನ್ ವಿಳಂಬದಿಂದಾಗಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು, ಜೂನ್ ಎರಡನೇ ವಾರ ನಿರೀಕ್ಷಿತ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರೈತರ ಕೃಷಿ ಕಾರ್ಯಕ್ಕೆ ಅಗತ್ಯವಿರುವ ಬೀಜ, ರಸಗೊಬ್ಬರ, ಕಳೆನಾಶಕ ದಾಸ್ತಾನು ಮಾಡಿಕೊಂಡು, ವ್ಯವಸ್ಥೆ ವಿತರಣೆಗೆ ಜಿಲ್ಲಾಡಳಿತ ಕೃಷಿ ಇಲಾಖೆ ಮೂಲಕ ಕ್ರಮಕೈಗೊಂಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ರಿಯಾಯಿತಿ ದರದಲ್ಲಿ ರೈತರಿಗೆ ರಸಗೊಬ್ಬರ ಮಾರಾಟ ಮಾಡಲು ಸರ್ಕಾರವೇ ರಸಗೊಬ್ಬರದ ದರ ನಿಗದಿಗೊಳಿಸಿ, ಆದೇಶಿಸಿದೆ. ಈ ಕುರಿತು ಎಲ್ಲ ರಸಗೊಬ್ಬರ ಮಾರಾಟಗಾರರಿಗೆ ಮಾಹಿತಿ ನೀಡಿ, ಸರಕಾರದ ಆದೇಶದಂತೆ ದರ ಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಗತ್ಯದಷ್ಡು, ಎಲ್ಲ ಪ್ರಕಾರದ ರಸಗೊಬ್ಬರಗಳ ದಾಸ್ತಾನು ಲಭ್ಯವಿದ್ದರೂ ಕೃತಕ ಅಭಾವ ಸೃಷ್ಟಿಸಿದರೆ ಹಾಗೂ ನಿಗದಿತ ದರಕ್ಕಿಂತ ಹೆಚ್ವು ದರ ವಸೂಲು ಮಾಡುತ್ತುರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ಅಥವಾ ಈ ರೀತಿಯಾಗಿ ಜಿಲ್ಲೆಯ ಯಾವುದೇ ಊರಿನಲ್ಲಿ ಕಂಡು ಬಂದರೆ ತಕ್ಷಣ ಅಂತಹ ಮಾರಾಟಗಾರ ಅಥವಾ ಅಂಗಡಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಜರುಗಿಸಲಾಗುತ್ತದೆ ಮತ್ತು ತನಿಖೆಯಲ್ಲಿ ಅಪರಾಧ ಸಾಬೀತಾದರೆ ಅವರ ಅಂಗಡಿ ಲೈಸೆನ್ಸ್ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಸಗೊಬ್ಬರಗಳ ನಿಗದಿತ ದರ:
ಮುಖ್ಯವಾಗಿ ರೈತರು ಮುಂಗಾರು ಬೆಳೆಗಳಿಗೆ ಯೂರಿಯಾ, ಡಿಎಪಿ, ಪೊಟ್ಯಾಸಿಯಮ್ ರಸಗೊಬ್ಬರ ಬಳಸುತ್ತಾರೆ. ಯೂರಿಯಾ ರಸಗೊಬ್ಬರ ಪ್ರತಿ ಚೀಲಕ್ಕೆ 266 ರೂ., ಡಿಎಪಿ ರಸಗೊಬ್ಬರ ಪ್ರತಿ ಚೀಲಕ್ಕೆ 1350 ರೂ. ಮತ್ತು ಪೊಟ್ಯಾಸಿಯಮ್ ರಸಗೊಬ್ಬರ ಪ್ರತಿ ಚೀಲಕ್ಕೆ 1700 ರೂ.ಗಳಷ್ಟು ಸರ್ಕಾರಿ ದರವಿದೆ. ರೈತರು ಈ ಬೆಲೆ ಕೊಟ್ಟು ರಸಗೊಬ್ಬರ ಖರೀದಿಸಬೇಕು. ಗೊಬ್ಬರ ಖರೀದಿಸುವಾಗ ರೈತರು ತಮ್ಮ ಆದಾರ್ ಸಂಖ್ಯೆ ಅಥವಾ ತಂಬ್ ನೀಡಿಬೇಕು ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಗೊಬ್ಬರ ಮಾರಾಟಗಾರರು ನಿಗದಿತ ದರ ಕ್ಕಿಂತ ಹೆಚ್ಚು ಹಣ ಕೇಳಿದರೆ ಅಥವಾ ಗೊಬ್ಬರದ ಜೋತೆಗೆ ಬೇರೆ ಕೃಷಿ ಪರಿಕರ ಅಥವಾ ಬೇರೆ ಗೊಬ್ಬರ ಖರೀದಿಸಲು ಒತ್ತಾಯಪಡಿಸಿ, ಕೇಳಿದ ಗೊಬ್ಬರ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳಿಗೆ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ರೈತರು ದೂರು ನೀಡಬೇಕು. ತಕ್ಷಣ ಅಧಿಕಾರಿಗಳು ಸೂಕ್ರ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುತ್ತಾರೆ ಎಂದು ಜಿಲ್ಲಾ0ಧಿಕಾರಿ ತಿಳಿಸಿದ್ದಾರೆ.