ಪಿಂಚಣಿ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಸರ್ಕಾರ ಶೇಕಡಾ 74 ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಈ ಸಂಬಂಧ ಮಸೂದೆಯನ್ನು ಮಾನ್ಸೂನ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಶೇಕಡಾ 49 ರಿಂದ ಶೇಕಡಾ 74 ಕ್ಕೆ ಹೆಚ್ಚಿಸುವ ಕಾನೂನು ತಿದ್ದುಪಡಿಯನ್ನು ಸಂಸತ್ತು ಈಗಾಗಲೇ ಅಂಗೀಕರಿಸಿದೆ. ವಿಮಾ ಕಾಯ್ದೆ 1938 ಅನ್ನು ಕೊನೆಯದಾಗಿ 2015 ರಲ್ಲಿ ತಿದ್ದುಪಡಿ ಮಾಡಲಾಗಿತ್ತು.
ತಿದ್ದುಪಡಿ ನಂತ್ರ ಐದು ವರ್ಷಗಳಲ್ಲಿ 26,000 ಕೋಟಿ ರೂಪಾಯಿ ವಿದೇಶಿ ಹೂಡಿಕೆಯಾಗಿದೆ. ಮಾನ್ಸೂನ್ ಅಧಿವೇಶನ ಅಥವಾ ಚಳಿಗಾಲದ ಅಧಿವೇಶನದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2013 ಕ್ಕೆ ತಿದ್ದುಪಡಿ ತರಬಹುದು ಎಂದು ಮೂಲಗಳು ತಿಳಿಸಿವೆ.
ಸದ್ಯ ಪಿಂಚಣಿ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿ ಶೇಕಡಾ 49ರಷ್ಟಿದೆ. ಎನ್‌ಪಿಎಸ್ ಟ್ರಸ್ಟ್ ನ ಅಧಿಕಾರ, ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ಪಿಎಫ್‌ಆರ್‌ಡಿ ನಿಯಮಗಳು 2015 ರ ಅಡಿಯಲ್ಲಿ ನಿರ್ಧರಿಸಲಾಗುತ್ತದೆ. ಕೇಂದ್ರ ಸರ್ಕಾರಿ ಸೇವೆಗೆ ಹೊಸದಾಗಿ ಸೇರ್ಪಡೆಗೊಳ್ಳುವವರಿಗೆ ಭಾರತ ಸರ್ಕಾರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಜನವರಿ 1, 2004 ರಿಂದ ಕಡ್ಡಾಯಗೊಳಿಸಿದೆ. ಮೇ 1, 2009 ರಿಂದ ಸ್ವಯಂಪ್ರೇರಿತ ಆಧಾರದ ಮೇಲೆ ಎಲ್ಲಾ ನಾಗರಿಕರಿಗೂ ಜಾರಿಗೆ ತರಲಾಗಿದೆ.