ನವದೆಹಲಿ: ದಿವ್ಯಾಂಗರಿಗೆ(ವಿಭಿನ್ನ ಸಾಮರ್ಥ್ಯ ಹೊಂದಿದವರಿಗೆ) ಫಾಸ್ಟ್ಯಾಗ್ ಉಚಿತವಾಗಿದ್ದು, ದೇಶದಾದ್ಯಂತ ಯಾವುದೇ ಟೋಲ್ ಗಳಲ್ಲಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ.
ಅಂದ ಹಾಗೆ, ದಿವ್ಯಾಂಗರ ಹೆಸರಲ್ಲಿ ನೋಂದಾಯಿಸಲ್ಪಟ್ಟ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಇರುತ್ತದೆ. ದಿವ್ಯಾಂಗರು ತಮ್ಮ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಶೂನ್ಯ ವಹಿವಾಟು ಅಥವಾ ಉಚಿತ ಫಾಸ್ಟ್ಯಾಗ್ ಪಡೆದುಕೊಳ್ಳಬೇಕು.
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳ ಪ್ರಕಾರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಂತಹ ವಾಹನಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುವ ಅವಕಾಶ ಒದಗಿಸಿದೆ. ದೈಹಿಕ ವಿಕಲಚೇತನರ ಬಳಕೆಗಾಗಿ ಮಾರ್ಪಡಿಸಿದ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಇಂತಹ ವಾಹನಗಳನ್ನು ಅಮಾನ್ಯ ವಾಹನ ಎಂದು ಹೇಳಲಾಗಿದೆ.
2011ರ ಜನಗಣತಿಯ ಪ್ರಕಾರ ಭಾರತದಲ್ಲಿ 2.7 ಕೋಟಿ ಜನ ವಿಕಲಚೇತನರು ಎಂದು ಗುರುತಿಸಲಾಗಿದೆ. ಅವರಲ್ಲಿ ಕೆಲವರು ವಾಹನ ಚಾಲನೆ ಮಾಡುತ್ತಾರೆ. ವಿಕಲಚೇತನರ ಸಬಲೀಕರಣ ಇಲಾಖೆಯಿಂದ ನಿರ್ದಿಷ್ಟಪಡಿಸಿದ ಪ್ರಮಾಣಪತ್ರವನ್ನು ಹೊಂದಿದ ವ್ಯಕ್ತಿಗಳ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳಲ್ಲಿ ಶುಲ್ಕ ಶೂನ್ಯವಾಗಿರುತ್ತದೆ.
ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್ ನ್ಯಾಯಾಧೀಶರು, ಸಂಸದರು, ಶಾಸಕರು, ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಮತ್ತು ಅಗತ್ಯ ಸೇವೆಗಳಿಗೆ ನಿಯೋಜಿಸಲಾದ ವಾಹನಗಳಿಗೆ ಉಚಿತ ಫಾಸ್ಟ್ಯಾಗ್ ಲಭ್ಯವಿದೆ. ವಿಕಲಚೇತನರಿಗೆ ಕೂಡ ಈ ಸೌಲಭ್ಯ ನೀಡಲಾಗಿದ್ದು ಉಚಿತ ಫಾಸ್ಟ್ಯಾಗ್ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.