ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ಫಾಸ್ಟಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ.
ಅಂದ ಹಾಗೆ, ಫಾಸ್ಟ್ಯಾಗ್ ಕಡ್ಡಾಯ ಮಾಡಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ನಕಲಿ ಫಾಸ್ಟ್ಯಾಗ್ ಮಾರಾಟಕ್ಕೆ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ನಿಗದಿತ ಮಾರಾಟಗಾರರಿಂದ ಮಾತ್ರ ಫಾಸ್ಟ್ಯಾಗ್ ಖರೀದಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಾಹನ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ಕೆಲವರು ವಾಹನ ಮಾಲೀಕರಿಗೆ ಕರೆ, ಎಸ್ಎಂಎಸ್ ಮೂಲಕ ಪಾಸ್ಟ್ಯಾಗ್ ಮಾರಾಟ ಮಾಡುತ್ತಿರುವುದಾಗಿ ತಿಳಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ myfastag ಮೊಬೈಲ್ ಆಪ್, www.ihmcl.in ವೆಬ್ಸೈಟ್, ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆದುಕೊಂಡಿರುವ 22 ಬ್ಯಾಂಕುಗಳ ಶಾಖೆಗಳಲ್ಲಿ, ಶಾಪಿಂಗ್ ಆಪ್ ಗಳಲ್ಲಿ ಮಾತ್ರ ಫಾಸ್ಟ್ಯಾಗ್ ಸ್ಟಿಕ್ಕರ್ ಖರೀದಿಸುವಂತೆ ತಿಳಿಸಲಾಗಿದೆ. ಸಹಾಯವಾಣಿ ಸಂಖ್ಯೆ 1033 ಗೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದು ಹೇಳಲಾಗಿದೆ.