ನಾಗಪುರ: ಫಾಸ್ಟಾಗ್ ಅನುಷ್ಠಾನಕ್ಕೆ ವಿಧಿಸಿರುವ ಗಡುವನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದ್ದಾರೆ.
ವಾಹನ ಮಾಲೀಕರು ಕೂಡಲೇ ಇ – ಪಾವತಿ ಸೌಲಭ್ಯವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಶುಲ್ಕವನ್ನು ಪಾವತಿಸಲು ಅನುಕೂಲವಾಗುವ ಫಾಸ್ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ. ಫೆಬ್ರವರಿ 15 ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯವಾಗಿದ್ದು ಇಲ್ಲದಿದ್ದರೆ ಎರಡುಪಟ್ಟು ಶುಲ್ಕ ಪಾವತಿಸಬೇಕಿದೆ.
ಫಾಸ್ಟ್ಯಾಗ್ ಕಡ್ಡಾಯಗೊಳಿಸುವುದರಿಂದ ಟೋಲ್ ಪ್ಲಾಜಗಳ ಮೂಲಕ ವಾಹನಗಳು ಮನಬಂದಂತೆ ಹಾದು ಹೋಗುವುದನ್ನು ತಪ್ಪಿಸಬಹುದು. ಸೋರಿಕೆ ತಡೆಯಬಹುದು. ಇದರಿಂದ ವಾಹನ ಮಾಲೀಕರಿಗೂ ಅನುಕೂಲವಾಗುತ್ತದೆ.
ಈ ಹಿಂದೆ ಎರಡು, ಮೂರು ಸಲ ಫಾಸ್ಟ್ಯಾಗ್ ನೋಂದಣಿ ದಿನಾಂಕವನ್ನು ವಿಸ್ತರಿಸಲಾಗಿದ್ದು ಈಗ ಮತ್ತೆ ವಿಸ್ತರಿಸುವುದಿಲ್ಲ. ಎಲ್ಲರೂ ಫಾಸ್ಟ್ಯಾಗ್ ಖರೀದಿಸಬೇಕು ಎಂದು ಗಡ್ಕರಿ ತಿಳಿಸಿದ್ದಾರೆ. ಈಗಾಗಲೇ ಶೇಕಡ 90 ಕ್ಕೂ ಅಧಿಕ ವಾಹನ ಮಾಲೀಕರು ಫಾಸ್ಟ್ಯಾಗ್ ಖರೀದಿಸಿದ್ದು ಶೇಕಡ 10 ರಷ್ಟು ವಾಹನಗಳಿಗೆ ಇನ್ನೂ ಬಾಕಿ ಇದೆ ಎಂದು ಹೇಳಲಾಗಿದೆ.