ದೇಶದಾದ್ಯಂತ ಫಾಸ್ಟ್ಟ್ಯಾಗ್ ಜಾರಿಗೆ ಬಂದಿದೆ. ಆದ್ರೆ ಜನರಿಗೆ ಫಾಸ್ಟ್ಟ್ಯಾಗ್ ಗೆ ಸಂಬಂಧಿಸಿದ ಕೆಲ ಸಮಸ್ಯೆ ಎದುರಾಗಿದೆ. ಫಾಸ್ಟ್ಟ್ಯಾಗ್ ಕಳುವಾದ್ರೆ ಅಥವಾ ಹಾಳಾದ್ರೆ ಏನು ಮಾಡಬೇಕು ಎಂಬ ಪ್ರಶ್ನೆ ಏಳುವುದು ಸಹಜ. ಹಾಗೆ ಕಳ್ಳತನವಾದ ಫಾಸ್ಟ್ಟ್ಯಾಗ್ ನಲ್ಲಿರುವ ಹಣ ಸುರಕ್ಷಿತವಾಗಿದೆಯಾ ಎಂಬುದನ್ನು ಪತ್ತೆ ಹಚ್ಚುವುದು ಅನೇಕರಿಗೆ ತಿಳಿದಿಲ್ಲ. ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ದೇಶಾದ್ಯಂತ ಎಲ್ಲಾ ವಾಹನಗಳಿಗೆ ಫಾಸ್ಟ್ಟ್ಯಾಗ್ ಅವಶ್ಯಕವಾಗಿದೆ. ವಾಹನದ ವಿಂಡ್ ಸ್ಕ್ರೀನ್ನಲ್ಲಿ ಫಾಸ್ಟ್ಯಾಗ್ ಅಳವಡಿಸಬೇಕಾಗಿದೆ. ಅದನ್ನು ಹಾಕಿದ ನಂತರ, ಟೋಲ್ ಪ್ಲಾಜಾದಲ್ಲಿರುವ ಕ್ಯಾಮೆರಾಗಳು ಅದನ್ನು ಸ್ಕ್ಯಾನ್ ಮಾಡುತ್ತದೆ. ಇದರ ನಂತರ ಟೋಲ್ ಮೊತ್ತ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ. ಈ ಪ್ರಕ್ರಿಯೆಯು ಕೆಲವು ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ವಾಹನಕ್ಕೆ ಕೇವಲ ಒಂದು ಫಾಸ್ಟ್ಯಾಗ್ ಲಭ್ಯವಿದೆ. ಫಾಸ್ಟ್ಯಾಗ್ ಹಾಳಾದ್ರೆ ಅದನ್ನು ಸುಲಭವಾಗಿ ಬದಲಾಯಿಸಬಹುದು. ವಾಹನದ ನೋಂದಣಿ ಪ್ರಮಾಣಪತ್ರ (ಆರ್ಸಿ), ಟ್ಯಾಗ್ ಐಡಿ ಮತ್ತು ಇತರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಹಳೆ ವಿವರ ನೀಡಿ ಮತ್ತೆ ಫಾಸ್ಟ್ಟ್ಯಾಗ್ ಪಡೆಯಬಹುದು.
ಮನೆಯಲ್ಲಿಯೇ ಕುಳಿತು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪೇಟಿಎಂ ಮೂಲಕ ಹೊಸ ಫಾಸ್ಟ್ಯಾಗ್ ಪಡೆಯಬಹುದು. ಇದಕ್ಕೆ 100 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಆಪ್ ಮೂಲಕ ವಾಹನದ ಆರ್ ಸಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ನೀಡುವ ಮೂಲಕ ಮತ್ತೆ ಫಾಸ್ಟ್ಯಾಗ್ ಪಡೆಯಬಹುದು. ಫಾಸ್ಟ್ಯಾಗ್ ನಲ್ಲಿರುವ ಹಣ ಅನಿಯಮಿತ. ಅದನ್ನು ಹೊಸ ಫಾಸ್ಟ್ಯಾಗ್ ಗೆ ವರ್ಗಾಯಿಸಬಹುದು. ಫಾಸ್ಟ್ಯಾಗ್ ಗಳನ್ನು, ಫಾಸ್ಟ್ಯಾಗ್ ಅಪ್ಲಿಕೇಶನ್ ಮೂಲಕ ಅಥವಾ ನೆಟ್ ಬ್ಯಾಂಕಿಂಗ್, ಕ್ರೆಡಿಟ್, ಡೆಬಿಟ್ ಕಾರ್ಡ್, ಯುಪಿಐ, ಪೇಟಿಎಂ ಮೂಲಕ ರೀಚಾರ್ಜ್ ಮಾಡಬಹುದು.
ವಾಹನ ಕಳ್ಳತನವಾದ್ರೆ ಬ್ಯಾಂಕಿನ ಸಹಾಯವಾಣಿಗೆ ಕರೆ ಮಾಡುವ ಮೂಲಕ ಫಾಸ್ಟ್ಯಾಗ್ ಬ್ಲಾಕ್ ಮಾಡಿಸಬೇಕು. ವಾಹನದ ಗಾಜು ಒಡೆದರೆ ಫಾಸ್ಟ್ಯಾಗ್ ಹಾಳಾಗುತ್ತದೆ. ಅದನ್ನು ನೀವು ಬದಲಾಯಿಸಬೇಕು. ಬ್ಯಾಂಕ್ ಅಥವಾ ಫಾಸ್ಟ್ಯಾಗ್ ಕೇಂದ್ರಕ್ಕೆ ಹೋಗಿ ನಿಮ್ಮ ಕಾರಿನ ಆರ್ಸಿ ಮತ್ತು ದಾಖಲೆಗಳನ್ನು ತೋರಿಸುವ ಮೂಲಕ ಎರಡನೇ ಫಾಸ್ಟ್ಯಾಗ್ ತೆಗೆದುಕೊಂಡರೆ ಯಾವುದೇ ಶುಲ್ಕವಿರುವುದಿಲ್ಲ.
ಮೊದಲು ಫಾಸ್ಟ್ಯಾಗ್ಗೆ ಅರ್ಜಿ ಸಲ್ಲಿಸಿದಾಗ, ಫಾಸ್ಟ್ಯಾಗ್ ಖಾತೆಯನ್ನು ರಚಿಸಲಾಗುತ್ತದೆ. ಅದು ಶಾಶ್ವತವಾಗಿರುತ್ತದೆ. ಈ ಫಾಸ್ಟ್ಯಾಗ್ ಖಾತೆಯನ್ನು ಆನ್ಲೈನ್ ಅಥವಾ ಫಾಸ್ಟ್ಯಾಗ್ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು. ಫಾಸ್ಟ್ಯಾಗ್ ಬದಲಿಸುವ ವೇಳೆ ಹಳೆಯ ಖಾತೆಯ ವಿವರಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಹೊಸ ಫಾಸ್ಟ್ಯಾಗ್ ನೀಡಲಾಗುತ್ತದೆ.