ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಯಶಸ್ವಿನಿ ಯೋಜನೆ ಮರು ಜಾರಿಗೆ 300 ಕೋಟಿ ರೂ. ನೀಡುವುದಾಗಿ ಹೇಳಿದ್ದು, ಈ ಮೂಲಕ ರೈತರ ಬಹುದಿನದ ಬೇಡಿಕೆಗೆ ಸರ್ಕಾರ ಅಸ್ತು ಎಂದಿದೆ.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮಹತ್ವಕಾಂಕ್ಷಿಯ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದರು. ನಂತರದಲ್ಲಿ ಸಹಕಾರಿ ಸದಸ್ಯರೆಲ್ಲರಿಗೂ ಇದನ್ನು ವಿಸ್ತರಿಸಲಾಗಿತ್ತು.
ಒಂದೇ ಒಂದು ಪೈಸೆ ಖರ್ಚು ಇಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತವಾಗಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಯಶಸ್ವಿನಿ ಯೋಜನೆಯಿಂದ ಹೆಚ್ಚಿನ ರೈತರಿಗೆ ಅನುಕೂಲವಾಗಿತ್ತು. ನಂತರದಲ್ಲಿ ಆಯುಷ್ಮಾನ್ ಯೋಜನೆ ಜಾರಿಗೊಳಿಸಿದ ಪರಿಣಾಮ ಯಶಸ್ವಿನಿ ಯೋಜನೆ ಕೈಬಿಡಲಾಗಿತ್ತು. ಆಯುಷ್ಮಾನ್ ಯೋಜನೆ ಅನುಕೂಲವಾಗಿದ್ದರೂ ಗ್ರಾಮೀಣ ಪ್ರದೇಶದ ರೈತರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ರೈತಸಂಘಟನೆಗಳು ಯಶಸ್ವಿನಿ ಯೋಜನೆ ಮರು ಜಾರಿಗೆ ಒತ್ತಾಯ ಮಾಡಿದ್ದವು. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಯಶಸ್ವಿನಿ ಯೋಜನೆ ಜಾರಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಲ್ಲಿ ಯಶಸ್ವಿನಿ ಯೋಜನೆ ಮರು ಜಾರಿಗೆ 300 ಕೋಟಿ ರೂಪಾಯಿ ಅನುದಾನ ಕಾಯ್ದಿರಿಸಿದ್ದಾರೆ. ಈ ಮೂಲಕ ರೈತರ ಬಹುದಿನದ ಬೇಡಿಕೆಗೆ ಸ್ಪಂದಿಸಿದ್ದಾರೆ. ರೈತರು ಮತ್ತು ರೈತ ಕುಟುಂಬದವರು ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಇದರಿಂದ ಅನುಕೂಲವಾಗುತ್ತದೆ.