ಮಡಿಕೇರಿ: ರೈತರಿಗೆ ಆರ್ಥಿಕ ಚೇತರಿಕೆಗಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಸೌಲಭ್ಯ ವಿಸ್ತರಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಗೋಣಿಕೊಪ್ಪದ ಪೊನ್ನಪ್ಪಸಂತೆ ಗ್ರಾಮದಲ್ಲಿ ನಿರ್ಮಾಣವಾದ ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ ಮತ್ತು ನೂತನ ಶಾಖೆ ಪ್ರಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ರೈತರ ಆರ್ಥಿಕ ಚೇತರಿಕೆಗಾಗಿ ಶೂನ್ಯ ಬಡ್ಡಿ ದರ ಸಾಲ ಸೌಲಭ್ಯ ವಿಸ್ತರಿಸಲಾಗಿದ್ದು, ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ಸೌಲಭ್ಯಗಳು ಹೆಚ್ಚಿನ ರೈತರಿಗೆ ಸಿಗುವ ಉದ್ದೇಶದಿಂದ ಯಶಸ್ವಿನಿ ಯೋಜನೆ ಅರ್ಜಿ ಸಲ್ಲಿಕೆ ಅವಧಿಯನ್ನು ಮಾರ್ಚ್ 30ರವರೆಗೆ ವಿಸ್ತರಿಸಲಾಗಿದೆ. ಸಾವಿರಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳಲ್ಲಿ 1650 ಬಗೆಯ ಚಿಕಿತ್ಸೆ ಪಡೆಯಬಹುದಾಗಿದೆ. ಈಗಾಗಲೇ 33 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.