ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಇನ್ನಿತರೇ ನಿಗಮಗಳ ಫಲಾಪೇಕ್ಷಿಗಳಿಂದ 2022-23ನೇ ಸಾಲಿಗೆ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
2022-23ನೇ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳಿಂದ ವಿವಿಧ ಯೋಜನೆಗಳಡಿ ಸೌಲಭ್ಯಕ್ಕೆ ಅರ್ಹ ಫಲಾಪೇಕ್ಷಿಗಳು ಅರ್ಜಿ ಸಲ್ಲಿಸಬಹುದು.
ಸ್ವಯಂ ಉದ್ಯೋಗಕ್ಕಾಗಿ ನೇರಸಾಲ ಯೋಜನೆ ಅಡಿಯಲ್ಲಿ ಸಣ್ಣ ಆದಾಯಗಳಿಸುವ ಆರ್ಥಿಕ ಚಟುವಟಿಕೆಗಳಿಗಾಗಿ ಘಟಕ ವೆಚ್ಚ ಗರಿಷ್ಟ 1 ಲಕ್ಷ ರೂ., ಇದರಲ್ಲಿ ಶೇ. 50 ರಷ್ಟು ನಿಗಮದ ಅವಧಿ ಸಾಲ ಹಾಗೂ ಬಾಕಿ ಶೇ. 50 ರಷ್ಟು ಸಹಾಯಧನವಿರುತ್ತದೆ. ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆ ನಿಗಮದ ಸಹಾಯಧನ ಹಾಗೂ ಬ್ಯಾಂಕ್ ಸಹಯೋಗದೊಂದಿಗೆ ಅವಕಾಶವಿದೆ.
ಇವಿ ಮತ್ತು ಇತರೇ ದ್ವಿಚಕ್ರ ವಾಹನ ಖರೀದಿ(ಇ-ಕಾಮರ್ಸ್ ಅಡಿಯಲ್ಲಿ ಗ್ರಾಹಕರಿಗೆ ಸರಕು ತಲುಪಿಸಲು ವಾಹನ ಖರೀದಿ) ಯೋಜನೆಯಡಿ ಗರಿಷ್ಠ 50,000 ರೂ. ಸಹಾಯಧನ, ಉಳಿದ ಮೊತ್ತ ಬ್ಯಾಂಕ್ ಸಾಲ, ಐ.ಎಸ್.ಬಿ ಚಟುವಟಿಕೆಗಾಗಿ ಸಹಾಯಧನ ಗರಿಷ್ಠ ಮೊತ್ತ 2 ಲಕ್ಷ ರೂ., ಉಳಿದ ಮೊತ್ತ ಬ್ಯಾಂಕ್ ಸಾಲ ಹಾಗೂ ಸರಕು ಸಾಕಾಣಿಕೆ ವಾಹನಕ್ಕೆ ಗರಿಷ್ಠ 3.50 ಲಕ್ಷ ರೂ.ಸಹಾಯಧನ, ಉಳಿದ ಮೊತ್ತ ಬ್ಯಾಂಕ್ ಸಾಲ ಇರುತ್ತದೆ.
ಭೂ ಒಡೆತನ ಯೋಜನೆಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕನಿಷ್ಠ 1 ಎಕರೆ ತರಿ ಜಮೀನು ಹಾಗೂ 2 ಎಕರೆ ಖುಷ್ಕಿ ಜಮೀನು ಅಥವಾ 20 ಲಕ್ಷ ರೂ.ಘಟಕ ವೆಚ್ಚದಲ್ಲಿ ಗರಿಷ್ಠ ಎಷ್ಟು ವಿಸ್ತೀರ್ಣ ಬರುತ್ತದೆಯೋ ಅಷ್ಟು ವಿಸ್ತೀರ್ಣ ಖರೀದಿಸಿ ಕೊಡಲಾಗುವುದು.
ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಕೃಷಿಕ/ ಒಣ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರಾವರಿ ಸೌಲಭ್ಯ ಹಾಗೂ ಪೂರಕ ಸಾಮಗ್ರಿಗಳು ಹಾಗೂ ವಿದ್ಯುದ್ದೀಕರಣ ಸೌಲಭ್ಯ ಕಲ್ಪಿಸಲಾಗುವುದು.
ಮೈಕ್ರೊ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಮಹಿಳೆಯರಲ್ಲಿ ಗುಂಪು ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಿ ಆದಾಯಗಳಿಸಲು ಅನುವಾಗುವಂತೆ ಕನಿಷ್ಠ 10 ಜನ ಸದಸ್ಯರಿರುವ ಮಹಿಳಾ ಸ್ವ ಸಹಾಯ ಸಂಘಗಳಿಗೆ ಗರಿಷ್ಠ 2.50 ಲಕ್ಷ ರೂ. ಮಂಜೂರು ಮಾಡಲಾಗುವುದು. ಇದರಲ್ಲಿ 1.50 ಲಕ್ಷ ರೂ.ಸಹಾಯಧನ ಹಾಗೂ 1 ಲಕ್ಷ ರೂ.ಸಾಲದ ರೂಪದಲ್ಲಿ ಕೊಡಲಾಗುವುದು.
ಅರ್ಜಿ ಸಲ್ಲಿಸಲು ಆಗಸ್ಟ್ 20 ಕೊನೆಯ ದಿನವಾಗಿದ್ದು, ಅರ್ಜಿಯನ್ನು ಸುವಿಧಾ ವೆಬ್‌ಸೈಟ್‌ನ https://suvidha.karnataka.gov.in ಪೋರ್ಟಲ್‌ನಲ್ಲಿ ಮಾತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅದರ ಸ್ವೀಕೃತಿಯನ್ನು ಫಲಾನುಭವಿಗಳು ತಮ್ಮ ಬಳಿ ಇಟ್ಟುಕೊಳ್ಳಬೇಕು. ಆ ಸ್ವೀಕೃತಿಯ ಯಾವುದೇ ಪ್ರತಿ ಹಾಗೂ ಯಾವುದೇ ದಾಖಲಾತಿಗಳು ಜಿಲ್ಲಾ ಕಛೇರಿಗೆ ಸಲ್ಲಿಸುವ ಅಗತ್ಯ ಇರುವುದಿಲ್ಲ. ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸುವಿಧಾ ಪೋರ್ಟಲ್ ಮೂಲಕವೇ ಮಾತ್ರ ಸಲ್ಲಿಸುವುದು. ಯಾವುದೇ ಸ್ವೀಕೃತಿ ಕಛೇರಿಗೆ ತೆಗೆದುಕೊಳ್ಳಲಾಗುವುದಿಲ್ಲ. ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ವಿವಿಧ ನಿಗಮಗಳಿಗೆ ಸಂಬಂಧಪಡುವ ಜಾತಿಗಳು ಆಯಾ ನಿಗಮದ ಅಡಿಯಲ್ಲಿ ಮಾತ್ರವೇ ಅರ್ಜಿ ಸಲ್ಲಿಸಬೇಕಾಗಿದೆ.
ವೆಬ್‌ಸೈಟ್ ವಿಳಾಸ
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವೆಬ್‌ಸೈಟ್ http://adcl.karnataka.gov.in
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ವೆಬ್‌ಸೈಟ್ http:/adijambava.karnataka.gov.in
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವೆಬ್‌ಸೈಟ್ http://kbdc.karnataka.gov.in
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವೆಬ್‌ಸೈಟ್ http://banjarathanda.kar.nic.in
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವೆಬ್‌ಸೈಟ್ http://kmvstdcl.karnata.gov.in
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವೆಬ್‌ಸೈಟ್ http://ksskdc.kar.nic.in ಗಮನಿಸಬಹುದಾಗಿದೆ.
ಬೇರೆ ನಿಗಮದಡಿ ಅರ್ಜಿ ಸಲ್ಲಿಸಿದ್ದಲ್ಲಿ ಹಾಗೂ ಅಭ್ಯರ್ಥಿಯು ಸಲ್ಲಿಸಿರುವ ಅರ್ಜಿ ಆ ನಿಗಮದಡಿ ಬರದೇ ಇದಲ್ಲಿ ಅದಕ್ಕೆ ನಿಗಮವು ಜವಾಬ್ದಾರಿಯಾಗಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಬಂಧ ಪಟ್ಟವರು ಆಯಾ ನಿಗಮದ ವೆಬ್‌ಸೈಟ್ ಅಥವಾ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, 2ನೇ ಮಹಡಿ ಜಿಲ್ಲಾ ಆಡಳಿತ ಭವನ, ರೂಂ. ನಂಬರ 102, ಕೊಪ್ಪಳ ಈ ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.