ಬೆಂಗಳೂರು: ರಾಜ್ಯದ 30.26 ಲಕ್ಷ ರೈತರಿಗೆ 19,370 ಕೋಟಿ ರೂಪಾಯಿ ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
30.86 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿತ್ತು. 30.26 ಲಕ್ಷ ರೈತರಿಗೆ 19.370 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ಹಾಗೂ 0.60 ಲಕ್ಷ ರೈತರಿಗೆ 1440 ಕೋಟಿ ರೂ ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡಲಾಗಿದೆ. ಶೂನ್ಯ ಬಡ್ಡಿ ದರದ ಸಾಲ ಶೇಕಡ 100 ರಷ್ಟು ಗುರಿ ಸಾಧಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
ಸಾಲ ಮನ್ನಾದ ಬಗ್ಗೆ ಯೋಚಿಸಿಲ್ಲ. ಬಲವಂತದ ಸಾಲ ವಸೂಲಾತಿಯೂ ಇಲ್ಲವೆಂದು ಅವರು ಹೇಳಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಡಿಸಿಸಿ ಬ್ಯಾಂಕಿನ ಅಲ್ಪಾವಧಿ ಮಧ್ಯಮಾವಧಿ ಕೃಷಿ ಸಾಲ ಬಡ್ಡಿ ಸಹಾಯಧನ ನೀಡಲು 1012 ಕೋಟಿ ರೂ. ಸಹಾಯಧನ ಅನುದಾನ ಕಲ್ಪಿಸಿದ್ದು, ಇದುವರೆಗೆ 757.21 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.