ಶಿವಮೊಗ್ಗ: ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ರೀತಿಯಲ್ಲಿ ಸಹಕಾರಿ ಇಲಾಖೆಗಳು ಕೆಲಸ ಮಾಡಬೇಕು. ಹಾಗೂ ಸಂಘಗಳಲ್ಲಿ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ಸಹಕಾರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1975 ರಲ್ಲಿ ವಿವಿಧ ರೀತಿಯ ಸಹಕಾರ ಸಂಘಗಳನ್ನು ಸಂಯೋಜಿಸಿ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ರಚಿಸಲಾಯಿತು. ಎಲ್ಲ ರೈತರಿಗೆ ಸಾಲ ಸೌಲಭ್ಯ ತಲುಪಬೇಕೆಂಬುದು ಇದರ ಉದ್ದೇಶವಾಗಿದೆ. ಸಹಕಾರಿ ಸಂಘಗಳಲ್ಲಿ ಪ್ರಮೋಟರ್ಸ್ ಆಗಿ ಯುವಕರನ್ನು ನೇಮಿಸಬೇಕು. ಸಣ್ಣ, ಮಧ್ಯಮ ಸೇರಿದಂತೆ ಎಲ್ಲ ಅರ್ಹ ರೈತರಿಗೆ ಸಾಲ ಸೌಲಭ್ಯ ಸಿಗುವಂತೆ ಆಗಬೇಕು. ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಹಸು ಸಾಕಾಣಿಕೆ, ಸಣ್ಣ ಭೂಮಿಯಲ್ಲಿ ಮೇವು ಬೆಳೆ, ಹುಲ್ಲು ಇತರೆ ಬೆಳೆಯಲಿಕ್ಕೆ ಉತ್ತೇಜನ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಹಾಲಿನ ಕಲಬೆರಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಬೇಕು. ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ಹಣ ನೀಡುತ್ತಿದ್ದು, ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು. ನಂದಿನಿ ಹಾಲಿನ ಪಾರ್ಲರ್ ಗಳಲ್ಲಿ ನಂದಿನಿ ಉತ್ಪನ್ನಗಳನ್ನು ಹೊರತುಪಡಿಸಿ ಇತರೆ ಉತ್ಪನ್ನಗಳು ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಕಾರ್ಯ ನಿರ್ವಹಿಸದ ಸಂಘಗಳ ನೋಂದಣಿಯನ್ನು ನಿಯಮಾನುಸಾರ ರದ್ದುಪಡಿಸಬೇಕು. ನಷ್ಟದಲ್ಲಿರುವ ಸಂಘಗಳ ಕುರಿತು ಸೂಕ್ತ ಕ್ರಮ ಕೈಗೊಂಡು ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಎಲ್ಲ ಸೊಸೈಟಿ ಲಿಕ್ವಿಡೇಟರ್ ಗಳು ಚಾರ್ಜ್ ತೆಗೆದುಕೊಂಡು ಸಂಘದ ಆಸ್ತಿ ಮತ್ತು ಭಾದ್ಯತೆಗಳ ಪಟ್ಟಿ ಮಾಡಿ ನಿರ್ವಹಿಸಬೇಕು. ಸೊಸೈಟಿ ಆಸ್ತಿಯನ್ನು ಸಂರಕ್ಷಿಸಬೇಕು. ಹಣ ದುರ್ಬಳಕೆ ಪ್ರಕರಣಗಳಲ್ಲಿ ಸಂಬಂಧಿಸಿದವರ ಆಸ್ತಿಯನ್ನು ಲಗತ್ತಿಸಿ, ಇಸಿ ಮತ್ತು ಖಾತೆಯಲ್ಲಿ ಇದು ಬರುವಂತೆ ಮಾಡಿ ಕ್ರಮ ವಹಿಸಬೇಕು. ಸಾರ್ವಜನಿಕರ ಹಣದ ವಿಷಯದಲ್ಲಿ ನ್ಯಾಯಯುತವಾಗಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಲ ವಸೂಲಾತಿ ಕಡೆ ಗಮನ ಹರಿಸಬೇಕು. ನಾನು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಹಣ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚನೆ ಮತ್ತು ಆಡಳಿತ ವಿಕೇಂದ್ರೀಕರಣ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಡಿಸಿಸಿ ಬ್ಯಾಂಕ್‍ನ ಮಾರಾಟ ಮತ್ತು ವಸೂಲಾಧಿಕಾರಿ ಮಹಾದೇವಪ್ಪ, ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಸಹಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.