ಬೆಂಗಳೂರು: ರೈತರು ಕೃಷಿ ಚಟುವಟಿಕೆ ಅಭಿವೃದ್ಧಿಗಾಗಿ ಸಹಕಾರಿ ಸಂಘಗಳ ಮೂಲಕ ಪಡೆಯುವ ಸಾಲದ ಮೇಲಿನ ಬಡ್ಡಿ ಸಹಾಯಧನ 4 ಲಕ್ಷ ರೂಪಾಯಿಗೆ ಮೀರದಂತೆ ರಾಜ್ಯ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.
ಮಧ್ಯಮ, ದೀರ್ಘಾವಧಿ ಸಾಲದ ಮೇಲಿನ ಬಡ್ಡಿಗೆ ಇದು ಅನ್ವಯವಾಗಲಿದ್ದು, ಸಹಕಾರಿ ಸಂಘ, ಸಹಕಾರಿ ಬ್ಯಾಂಕುಗಳಿಗೆ ಈ ಕುರಿತಾಗಿ ಸುತ್ತೋಲೆ ಹೊರಡಿಸಲಾಗಿದೆ. ರೈತರು ಕೃಷಿ ಅಭಿವೃದ್ಧಿಗಾಗಿ ದೀರ್ಘಾವಧಿ, ಮಧ್ಯಮಾವಧಿ ಸಾಲ ಪಡೆಯುತ್ತಾರೆ. ಇಂತಹ ರೈತರ ಕುಟುಂಬ 10 ವರ್ಷದ ಅವಧಿಯಲ್ಲಿ ಒಟ್ಟು 4 ಲಕ್ಷ ರೂಪಾಯಿ ಬಡ್ಡಿ ಸಹಾಯಧನ ಪಡೆದುಕೊಂಡಿದ್ದರೆ ಅಂತವರು ಇನ್ನುಮುಂದೆ ಬಡ್ಡಿ ದರ ರಿಯಾಯಿತಿ ಪ್ರಯೋಜನ ಪಡೆಯುವಂತಿಲ್ಲ ಎಂದು ಹೇಳಲಾಗಿದೆ.
ಕೃಷಿ ಅಭಿವೃದ್ಧಿಗೆ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಪ್ರಾಥಮಿಕ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕುಗಳು ಮೊದಲಾದ ಬ್ಯಾಂಕ್ ಗಳ ಮೂಲಕ ದೀರ್ಘಾವಧಿ ಸಾಲ ಸೌಲಭ್ಯ ಪಡೆದು, 2004 ರ ಏಪ್ರಿಲ್ 1 ರಿಂದ ಇದುವರೆಗೆ ಪಡೆದ ಸಾಲಕ್ಕೆ ಬಡ್ಡಿ ಸಹಾಯಧನ 4 ಲಕ್ಷ ರೂಪಾಯಿ ಸಂದಾಯವಾಗಿದ್ದರೆ ಅಂತಹ ರೈತರಿಗೆ ಇನ್ನು ಮುಂದೆ ಶೇಕಡ 3 ರಷ್ಟು ರಿಯಾಯಿತಿ ಬಡ್ಡಿ ದರದ ಸೌಲಭ್ಯ ಸಿಗುವುದಿಲ್ಲ ಎಂದು ಹೇಳಲಾಗಿದೆ.
ಪಡಿತರ ಚೀಟಿಯಲ್ಲಿ ಹೆಸರು ಇರುವವರೆಲ್ಲ ಕೃಷಿ ಕುಟುಂಬದವರು ಎಂದು ಪರಿಗಣಿಸಲ್ಪಡುತ್ತದೆ. ಅವರೆಲ್ಲರ ಬಡ್ಡಿ ಸಹಾಯಧನ 4 ಲಕ್ಷ ರೂಪಾಯಿ ಮೀರುವಂತಿಲ್ಲ. ಪ್ರತ್ಯೇಕ ಪಡಿತರ ಚೀಟಿ ಹೊಂದಿದ್ದರೆ ಕುಟುಂಬವೆಂದು ಪರಿಗಣಿಸಬೇಕಾಗಿಲ್ಲ ಎನ್ನಲಾಗಿದ್ದು, ಆದೇಶದಲ್ಲಿಯೇ ಗೊಂದಲ ಉಂಟಾಗಿದೆ. ಶೂನ್ಯ ಬಡ್ಡಿದರದಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆಯುವ ರೈತರಿಗೆ ಇದು ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.