ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಕಾರಣದಿಂದ ಲಾಕ್ಡೌನ್ ಜಾರಿ ಮಾಡಲಾಗಿದೆ. ಹೀಗಾಗಿ ಸಾಲದ ಕಂತು ಪಾವತಿ ವಿನಾಯಿತಿ ನೀಡಬೇಕು. ಸಾಲಪಾವತಿ ಅವಧಿ ಮುಂದೂಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಸ್ತ್ರೀಶಕ್ತಿ ಸಂಘಗಳ ಸದಸ್ಯರು ಸಾಲದ ಕಂತು ಪಾವತಿಸಲು ಮೂರು ತಿಂಗಳು ಮುಂದೂಡಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಲಾಕ್ ಡೌನ್ ಜಾರಿ ಮಾಡಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಸಾಲದ ಕಂತು ಪಾವತಿಸಲು ಸಾಧ್ಯವಾಗದ ಕಾರಣ ಮೂರು ತಿಂಗಳು ಸಾಲದ ಕಂತಿನ ಪಾವತಿ ಅವಧಿ ಮುಂದೂಡಿಕೆ ಮಾಡಬೇಕೆಂದು ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಆಗ್ರಹಿಸಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಈ ಬಗ್ಗೆ ಮನವಿ ಮಾಡಿದ್ದು ಅವರು, ಸಕಾಲಕ್ಕೆ ಸಾಲದ ಕಂತು ಪಾವತಿಸದಿದ್ದರೆ ಬಡ್ಡಿ ಹೊರೆ ಬೀಳುತ್ತದೆ. ಸಾಲದ ಕಂತು ಮುಂದೂಡಿಕೆ ಅಧಿಕಾರ ಡಿಸಿಸಿ ಬ್ಯಾಂಕ್ ಗೆ ಇಲ್ಲದ ಕಾರಣ, ಸರ್ಕಾರ ಮತ್ತು ಅಪೆಕ್ಸ್ ಬ್ಯಾಂಕ್ ಗೆ ಮನವರಿಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನು ರೈತರ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಸಂಬಂಧಿಸಿದಂತ ಮಾಹಿತಿ ಕೋರಿ ಚಿಕ್ಕಮಗಳೂರು ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದ ಅಪೆಕ್ಸ್ ಬ್ಯಾಂಕ್ ಗೆ ಪತ್ರ ಬರೆಯಲಾಗಿದೆ. ರೈತರಿಗೆ ಬೆಳೆ ಸಾಲ ಪಾವತಿಸಲು ತೊಂದರೆಯಾಗುತ್ತಿದೆ. ನಿಗದಿತ ಅವಧಿಯಲ್ಲಿ ಸಾಲ ಕಟ್ಟದಿದ್ದರೆ ಪೂರ್ಣ ಪ್ರಮಾಣದ ಬಡ್ಡಿ ಪಾವತಿಸಬೇಕಿದೆ. ಈ ಕಾರಣದಿಂದ ರೈತರು ಸಾಲ ಮರುಪಾವತಿ ಅವಧಿ ಮುಂದೂಡುವಂತೆ ಮನವಿ ಮಾಡಿದ್ದು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರೂ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದು, ಬೆಳೆಸಾಲ, ಸ್ತ್ರೀ ಶಕ್ತಿ ಸಂಘಗಳ ಸಾಲ ಮರುಪಾವತಿ ಅವಧಿ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.