ಬೆಂಗಳೂರು: ರೈತರಿಗೆ ಶೂನ್ಯ ಬಡ್ಡಿದರ ಸಾಲದ ಷರತ್ತು ಸಡಿಲಿಕೆ ಮಾಡಲಾಗಿದೆ. ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿವರೆಗೆ ಅಲ್ಪವಧಿ ಕೃಷಿ ಸಾಲ ನೀಡಲು ಸರ್ಕಾರದಿಂದ ವಿಧಿಸಲಾಗಿದ್ದ ಷರತ್ತು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
2020 ರಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ನೀಡಲಾಗುವ ಸಾಲಗಳಿಗೆ ಮಾತ್ರ ಶೂನ್ಯ ಬಡ್ಡಿ ದರ ಅನ್ವಯವಾಗುತ್ತದೆ ಎಂದು ಹೇಳಲಾಗಿತ್ತು. ಈಗ ಅದನ್ನು ಒಬ್ಬ ವ್ಯಕ್ತಿಗೆ ಅನ್ವಯಿಸಲಾಗಿದೆ. 3 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಾಲಗಳ ಸಂಪೂರ್ಣ ಮೊತ್ತಕ್ಕೆ ಸಾಮಾನ್ಯ ಬಡ್ಡಿ ದರ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು, ಮಾಸಿಕ 20 ಸಾವಿರ ರೂ. ವೇತನ, ಪಿಂಚಣಿ ಪಡೆಯುವ ಮತ್ತು ಕಳೆದ ಮೂರು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ್ದರೆ ಅಂತಹ ರೈತರಿಗೆ ಪ್ರೋತ್ಸಾಹ ಧನ ಸಿಗುವುದಿಲ್ಲ. ಇದಕ್ಕಾಗಿ ಅರ್ಜಿ ನಮೂನೆಯಲ್ಲಿ ರೈತರು ದೃಢೀಕರಣ ನೀಡಬೇಕಿದೆ ಎಂಬ ಷರತ್ತನ್ನು ಕೈಬಿಡಲಾಗಿದೆ.
ಸಹಕಾರಿ ಸಂಘಗಳ ಮೂಲಕ ರೈತರಿಗೆ ವಿತರಿಸಿದ ಅಲ್ಪಾವಧಿ ಕೃಷಿ ಸಾಲಗಳಿಗೆ ರಾಜ್ಯ ಸರ್ಕಾರದಿಂದ ಶೇಕಡ 5.56 ರಷ್ಟು ಬಡ್ಡಿ ಸಹಾಯಧನ ನಿಗದಿಪಡಿಸಲಾಗಿದೆ. ಬಡ್ಡಿದರ ಸಹಾಯಧನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಶೇಕಡ 2 ರಷ್ಟು, ಡಿಸಿಸಿ ಬ್ಯಾಂಕುಗಳಿಗೆ ಶೇಕಡ 3.6 ರಷ್ಟು ಹಂಚಿಕೆ ಮಾಡಲಾಗಿದೆ.