ಬೆಂಗಳೂರು: ರೈತರು ಸಾಲ ಪಡೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರ ಮತ್ತೊಂದು ಕ್ರಮಕೈಗೊಂಡಿದೆ. ಅರ್ಹರಿಗೆ ಕೃಷಿ ಸಾಲ ತಲುಪಿಸಲು ತಂತ್ರಾಂಶ ರೂಪಿಸಲಾಗಿದ್ದು, ರೈತರ ಅಲೆದಾಟ ತಪ್ಪಿಸಿ ಕೆಲವೇ ನಿಮಿಷಗಳಲ್ಲಿ ಸಾಲ ಪಡೆದುಕೊಳ್ಳಲು ಅನುಕೂಲವಾಗುವಂತೆ ಮಾಡಲಾಗುತ್ತಿದೆ.
ಕೃಷಿ ಸಾಲಗಳನ್ನು ವಿತರಿಸಲು ಏಕೀಕೃತ ತಂತ್ರಾಂಶ ವ್ಯವಸ್ಥೆ ಇರಲಿಲ್ಲ. ಇದರಿಂದ ದುರ್ಬಳಕೆಯಾಗಿ ಬೊಕ್ಕಕಸಕ್ಕೆ ನಷ್ಟವಾಗುತ್ತಿತ್ತು. ಸರ್ಕಾರ ನೂತನ ತಂತ್ರಾಂಶ ಸಿದ್ಧಪಡಿಸುತ್ತಿದ್ದು, ಅರ್ಹ ಫಲಾನುಭವಿ ರೈತರಿಗೆ ಕೃಷಿ ಸಾಲ ತಲುಪಿಸಲು ಅನುಕೂಲವಾಗಲಿದೆ.
ಎಲ್ಲಾ ರೀತಿಯ ಕೃಷಿ ಸಾಲ ವಿತರಣೆಗೆ ಫ್ರೂಟ್ಸ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಸೇವೆ ಆರಂಭವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಹೊಸ ಪೋರ್ಟಲ್ ರಚಿಸಲಾಗುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ಪೋರ್ಟಲ್ ಸಿದ್ಧವಾಗಲಿದ್ದು, ರೈತರ ಅಲೆದಾಟ ತಪ್ಪಲಿದೆ.
ರೈತರು ಸಾಲ ಪಡೆದುಕೊಳ್ಳಲು ತಾವೇ ತಹಸೀಲ್ದಾರ್ ಕಚೇರಿಗೆ ತೆರಳಿ ಫಾರಂ ನಂಬರ್ ಮೂರರ ಮೇಲೆ ಅನುಮತಿ ಪಡೆದು ನೋಂದಣಿ ಕಚೇರಿಗೆ ತೆರಳಿ ಸಾಲ ಪಡೆಯುವ ಬಗ್ಗೆ ಋಣ ಪತ್ರ ದಾಖಲಿಸಿ ದಾಖಲೆ ಸಲ್ಲಿಸಬೇಕಿತ್ತು. ಈಗ ಆಧಾರ್ ಕಾರ್ಡ್, ಗುರುತಿನ ಚೀಟಿ ಸಂಖ್ಯೆ ನೀಡುವ ಮೂಲಕ ರೈತರ ಪೂರ್ಣ ಮಾಹಿತಿಯನ್ನು ಸ್ಥಳದಲ್ಲೇ ಪಡೆದುಕೊಂಡು ಸಾಲ ವಿತರಿಸಲು ಸುಲಭವಾಗುವಂತೆ ಮಾಡಲಾಗಿದೆ. ಇದರಿಂದ ಕೃಷಿ ಸಾಲ ವಿತರಣೆಯಲ್ಲಿ ಸಹಕಾರ ಕ್ಷೇತ್ರದ ಸೇವೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲಿದೆ ಎಂದು ಹೇಳಲಾಗಿದೆ.