ಬೆಂಗಳೂರು: ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಬ್ಯಾಂಕುಗಳು ಮುಂದೆ ಬಂದಿದ್ದು, ಅರ್ಹ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆ ಸಾಲ ಪುನರ್ ರಚನೆ ಮಾಡಲಾಗುವುದು. ಇದರಿಂದಾಗಿ ಅಲ್ಪಾವಧಿ ಬೆಳೆ ಸಾಲಗಳು ದೀರ್ಘಾವಧಿ ಸಾಲದ ರೂಪದಲ್ಲಿ ಪರಿವರ್ತನೆಯಾಗುವ ಸಾಧ್ಯತೆ ಇದೆ.
ಆರ್.ಬಿ.ಐ. ನಿರ್ದೇಶನದ ಅನ್ವಯ ಬ್ಯಾಂಕುಗಳು ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ರಾಜ್ಯದಲ್ಲಿ ಮುಂಗಾರು ಕೊರತೆ ಹಿನ್ನೆಲೆಯಲ್ಲಿ ಬೆಳೆ ನಷ್ಟವಾಗಿದ್ದು, ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ. ಅಗತ್ಯ ಪರಿಹಾರೋಪಾಯ ಕ್ರಮಗಳ ಕೈಗೊಳ್ಳಲು ಸೂಚಿಸಲಾಗಿದ್ದು, ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಬ್ಯಾಂಕರ್ ಗಳ ಸಮಿತಿಯ ವಿಶೇಷ ಸಭೆ ನಡೆಸಿ ಅರ್ಹ ರೈತರ ಸಾಲಗಳ ಮರು ರಚನೆಗೆ ತೀರ್ಮಾನ ಕೈಗೊಳ್ಳಲಾಗಿದೆ.
ಎಲ್ಲಾ ಬ್ಯಾಂಕುಗಳು, ಆರ್.ಆರ್.ಬಿ.ಗಳಿಗೆ ಸಭೆಯ ನಡಾವಳಿ ಸಹಿತ ಸೂಚನೆಯನ್ನು ಕಳುಹಿಸಲಾಗಿದೆ. ಪರಿಹಾರ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಆರ್.ಬಿ.ಐ. ನಿರ್ದೇಶನ ಪಾಲಿಸಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿರುವುದಾಗಿ ರಾಜ್ಯಮಟ್ಟದ ಬ್ಯಾಂಕರ್ ಗಳ ಸಮಿತಿಯ ಉಸ್ತುವಾರಿ ಸಂಚಾಲಕ ಬಿ. ಪಾರ್ಶ್ವನಾಥ್ ತಿಳಿಸಿದ್ದಾರೆ.