ಬೆಂಗಳೂರು: ರಾಜ್ಯದ ರೈತರಿಗೆ 2020-21ನೇ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಹಾಗೂ ರಿಯಾಯಿತಿ ಬಡ್ಡಿದರದಲ್ಲಿ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲ ನೀಡುವ ಯೋಜನೆಯಲ್ಲಿನ ಷರತ್ತುಗಳನ್ನು ಸಡಿಲಿಸಲಾಗಿದೆ.
ರಾಜ್ಯ ಸರ್ಕಾರದ ಯೋಜನೆಯಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಹಾಗೂ ರಿಯಾಯಿತಿ ಬಡ್ಡಿದರದಲ್ಲಿ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲ ನೀಡುವ ಯೋಜನೆಯಲ್ಲಿ ಈ ಮುಂಚೆ ನೀಡಿದ್ದ ಷರತ್ತಗಳನ್ನು ರಾಜ್ಯ ಸರ್ಕಾರವು ಸಡಿಲಗೊಳಿಸಿ ದಿನಾಂಕ 29-07-2021 ರಂದು ಆದೇಶ ನೀಡಿದೆ.
ಮುಂಚಿನ ಆದೇಶದಲ್ಲಿ ಈ ಯೋಜನೆಯು ಒಂದು ಕುಟುಂಬಕ್ಕೆ ಗರಿಷ್ಟ 3 ಲಕ್ಷ ರೂ. ನೀಡಿದ ಸಾಲಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಈ ಷರತ್ತನ್ನು ಸಡಿಲಿಸಿ ಒಂದು ಕುಟುಂಬಕ್ಕೆ ಬದಲಾಗಿ ಒಬ್ಬ ವ್ಯಕ್ತಿಗೆ 3 ಲಕ್ಷ ರೂ.ಗಳವರೆಗೆ ಯೋಜನೆಯನ್ನು ಅನ್ವಯಿಸಲಾಗಿದೆ.
ಎರಡನೇಯದಾಗಿ ಸಾಲ ಪಡೆದ ರೈತ ಸರ್ಕಾರಿ/ಸರ್ಕಾರಿ ಸಾಮ್ಯದ ಸಂಸ್ಥೆಗಳಲ್ಲಿ ನೌಕರನಾಗಿದ್ದು ಮಾಸಿಕ .20,000 ರೂ. ಗಳ ವೇತನ/ಪಿಂಚಣಿ ಪಡೆಯುತ್ತಿರುವ ಅಥವಾ ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದ್ದರೆ ಅಂತಹ ರೈತರಿಗೆ ಬಡ್ಡಿ ಪ್ರೋತ್ಸಾಹಧನ ದೊರೆಯುವುದಿಲ್ಲವೆಂದಿತ್ತು. ಇದೀಗ ಈ ಷರತ್ತನ್ನು ಸಂಪೂರ್ಣವಾಗಿ ಕೈಬಿಟ್ಟು ಅಂತಹ ರೈತರಿಗೂ ಈ ಯೋಜನೆಯ ಲಾಭವು ಸಿಗುವಂತೆ ಅವಕಾಶ ಕಲ್ಪಿಸಲಾಗಿದೆ.
ಅದೇ ರೀತಿ ರೈತ ಸದಸ್ಯರು ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ಶೇ.3 ರ ಬಡ್ಡಿ ದರದಲ್ಲಿ ಒದಗಿಸುವ ಯೋಜನೆಯು ಒಂದು ಕುಟುಂಬಕ್ಕೆ ಗರಿಷ್ಟ 10 ಲಕ್ಷ ರೂ.ಗಳವರೆಗಿನ ಸಾಲಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಅಲ್ಲದೇ ಅಲ್ಪಾವಧಿ ಬೆಳೆ ಸಾಲ ಮತ್ತು ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲದ ಮಿತಿ ಒಂದು ಕುಟುಂಬಕ್ಕೆ ಅನ್ವಯವಾಗುತ್ತಿತ್ತು. ಈ ಷರತ್ತಿನನ್ವಯ ಒಂದೇ ಕುಟುಂಬದಲ್ಲಿ ಗಂಡ, ಹೆಂಡತಿ ಅಥವಾ ಮಕ್ಕಳ ಹೆಸರಿನಲ್ಲಿ ಪಡೆದ ಸಾಲವು ಒಟ್ಟಾರೆ 10 ಲಕ್ಷ ರೂ.ಮೀರಿದಲ್ಲಿ ಬ್ಯಾಂಕು ವಿಧಿಸುವ ಸಾಮಾನ್ಯ ಬಡ್ಡಿದರ ಅನ್ವಯವಾಗುತ್ತಿತ್ತು. ಇದೀಗ ಈ ಷರತ್ತನ್ನು ಒಂದು ಕುಟುಂಬದ ಬದಲಾಗಿ ಒಬ್ಬ ಸದಸ್ಯನಿಗೆ ಎಂದು ಸಡಿಲಿಸಲಾಗಿದೆ.
ಅಂತಿಮವಾಗಿ ರೈತರು ಎರಡು ಸಂಘಗಳ ಕಾರ್ಯವ್ಯಾಪ್ತಿನಲ್ಲಿ ಬೇರೆ ಬೇರೆ ಭೂಮಿ ಹೊಂದಿದ್ದರೆ ಅಥವಾ ಭೂಮಿ ಮತ್ತು ವಾಸ ಸ್ಥಳ ವಿವಿಧ ಸಂಘಗಳ ವ್ಯಾಪ್ತಿಯಲ್ಲಿದ್ದರೆ ಯಾವ ಸಂಘದ ವ್ಯಾಪ್ತಿಯಲ್ಲಿ ವಾಸವಿರುತ್ತಾನೆಯೋ ಆ ಸಂಘದಲ್ಲಿ ಪಡೆದ ಸಾಲಗಳಿಗೆ ಮಾತ್ರ ಬಡ್ಡಿ ಸಹಾಯಧನ ಅನ್ವಯವಾಗುತ್ತಿತ್ತು. ಇದೀಗ ಈ ಷತ್ತನ್ನು ಸಡಿಲಿಸಿ ಎರಡು ಸಹಕಾರ ಸಂಘಗಳಲ್ಲಿ ಸಾಲ ಪಡೆದಿದ್ದಲ್ಲಿ ಒಂದು ಸಂಘದಲ್ಲಿ ಮಾತ್ರ ರಿಯಾಯಿತಿ ಬಡ್ಡಿದರವನ್ನು ಪಡೆಯಬಹುದಾಗಿರುತ್ತದೆ.
ರಾಜ್ಯ ಸರ್ಕಾರವು ಮೇಲ್ಕಂಡ ಷರತ್ತನ್ನು ಸಡಿಲಿಸಿರುವುದರಿಂದ ಜಿಲ್ಲೆಯ ಅನೇಕ ರೈತರಿಗೆ ಈ ಯೋಜನೆಯ ಲಾಭ ದೊರೆಯುವಂತಾಗಿದೆ ಎಂದು ಹೇಳಲಾಗಿದೆ.