ಬೆಂಗಳೂರು: ಪ್ರತಿ ವರ್ಷ ಕಾರ್ಮಿಕರ ಕೂಲಿ, ಬೀಜ, ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ದರ ಏರಿಕೆಯಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿ ರಸಗೊಬ್ಬರ ದರ ಇನ್ನಿಲ್ಲದಂತೆ ಏರಿಕೆ ಕಂಡಿದೆ.
ಕಷ್ಟಪಟ್ಟು ಬೆಳೆ ಬೆಳೆದರೂ ರೈತರಿಗೆ ಸಮರ್ಪಕವಾದ ಬೆಲೆ ಸಿಗುತ್ತಿಲ್ಲ. ಇದೇ ಹೊತ್ತಲ್ಲಿ ಡಿಎಪಿ, ಯೂರಿಯಾ, ಪೊಟ್ಯಾಶಿಯಂ, ಎನ್.ಪಿ.ಕೆ. ಸೇರಿದಂತೆ ವಿವಿಧ ರೀತಿಯ ರಸಗೊಬ್ಬರಗಳ ದರ ಭಾರಿ ಏರಿಕೆ ಕಂಡಿದೆ.
50 ಕೆಜಿ ಚೀಲಕ್ಕೆ 50 ರಿಂದ 100 ರೂಪಾಯಿವರೆಗೆ ಹೆಚ್ಚಳ ಮಾಡುತ್ತಿದ್ದ ಕಂಪನಿಗಳು ಈಗ ಶೇಕಡ 15 ರಿಂದ 25ರಷ್ಟು ದರ ಏರಿಕೆ ಮಾಡಿವೆ. ಜೂನ್ ನಲ್ಲಿ ರಸಗೊಬ್ಬರ ಏರಿಕೆ ಮಾಡುವ ಬದಲು ಏಪ್ರಿಲ್ ನಲ್ಲಿಯೇ 50 ಕೆಜಿ ಚೀಲಕ್ಕೆ 150 ರಿಂದ 400 ರೂ.ವರೆಗೆ ಕಂಪನಿಗಳು ರಸಗೊಬ್ಬರ ಬೆಲೆ ಹೆಚ್ಚಳ ಮಾಡಿವೆ. ರೈತರು ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಿ ರಸಗೊಬ್ಬರ ಖರೀದಿಸಿದ್ದಾರೆ.
450 ರೂ. ಇದ್ದ ಕೂಲಿ ದರ 700 ರೂ.ವರೆಗೂ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಕೃಷಿ ಯಂತ್ರೋಪಕರಣಗಳ ಬಾಡಿಗೆ ಹೆಚ್ಚಳವಾಗಿದೆ.
ಡಿಎಪಿ 1200 ರೂ.ನಿಂದ 1350 ರೂ. ಗೆ ಹೆಚ್ಚಳವಾಗಿದ್ದು, ಪೊಟಾಷ್ 900 ನಿಂದ 1,600 ರೂ.ಗೆ ಹೆಚ್ಚಳವಾಗಿದೆ. ಎನ್.ಪಿ.ಕೆ. ಕಾಂಪ್ಲೆಕ್ಸ್ 1000 ರೂ.ನಿಂದ 1470 ರೂ., ಎಂಓಪಿ 1015 ರೂ.ನಿಂದ 1700 ರೂ., ಯೂರಿಯಾ 250 ರಿಂದ 300 ರೂ. ಗೆ ಹೆಚ್ಚಳವಾಗಿದೆ.