ನವದೆಹಲಿ: ಕೇಂದ್ರದ ಕೃಷಿ ನೀತಿ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಗುರುವಾರ ನಡೆದ ಎರಡನೇ ಸುತ್ತಿನ ಮಾತುಕತೆ ಫಲಪ್ರದವಾಗಿಲ್ಲ. ಈ ಮಾತುಕತೆ ಅಪೂರ್ಣಗೊಂಡಿದ್ದು, ನಾಳೆ ಮತ್ತೆ ಸಭೆ ಸೇರಲು ತೀರ್ಮಾನಿಸಲಾಗಿದೆ.
ರೈತರ ಹೋರಾಟಕ್ಕೆ ಸ್ಪಂದಿಸಿ ಪ್ರಮುಖ ಬೇಡಿಕೆಯಾಗಿರುವ ಕನಿಷ್ಠ ಬೆಂಬಲ ಬೆಲೆ ಮುಂದುವರಿಸುವ ಕುರಿತಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕನಿಷ್ಠ ಬೆಂಬಲ ಬೆಲೆ ನೀತಿಯನ್ನು ರದ್ದುಪಡಿಸುವ ಪ್ರಶ್ನೆ ಇಲ್ಲ. ರೈತರ ಹಿತಾಸಕ್ತಿಗೆ ಅಪಾಯಕಾರಿ ಎಂದು ಹೇಳಲಾಗುತ್ತಿರುವ ಅಂಶಗಳ ಬಗ್ಗೆ ಕೇಂದ್ರ ಸರಕಾರ ಪರಿಶೀಲನೆ ನಡೆಸಲಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತ ಮುಖಂಡರಿಗೆ ಭರವಸೆ ನೀಡಿದ್ದಾರೆ.
ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ, ಮಂಡಿಗಳಲ್ಲಿ ಮಾರಾಟ ಮುಂದುವರೆಯಲಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ. ಇದರೊಂದಿಗೆ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಲಾಗಿದ್ದು ನಾಳೆ ಮತ್ತೊಮ್ಮೆ ಸಭೆ ನಡೆಸಲಾಗುವುದು ಎನ್ನಲಾಗಿದೆ.