ಬೆಂಗಳೂರು: ನಬಾರ್ಡ್ ನಿಂದ ಹೆಚ್ಚುವರಿ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರ ಏರಿಕೆ ಮಾಡಲಾಗಿದ್ದು, ರಾಜ್ಯದ ಡಿಸಿಸಿ ಬ್ಯಾಂಕುಗಳು ರೈತರಿಗೆ ಬೆಳೆ ಸಾಲ ವಿತರಿಸಲು ಮೀನಮೇಷ ಎಣಿಸುವಂತಾಗಿದೆ.
ಬೆಳೆ ಸಾಲದ ಪ್ರಮಾಣ ಕಡಿತಗೊಳಿಸಿ ನಷ್ಟದಿಂದ ಪಾರಾಗಲು ಡಿಸಿಸಿ ಬ್ಯಾಂಕುಗಳು ಪ್ಲಾನ್ ಮಾಡಿಕೊಂಡಿವೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹೆಚ್ಚುವರಿ ಅಲ್ಪಾವಧಿ ಸಾಲದ ಮೇಲಿನ ಬಡ್ಡಿದರ ಏರಿಕೆ ಮಾಡಿದ ಪರಿಣಾಮ ರೈತರಿಗೂ ಬಡ್ಡಿ ಬರೆ ಬೀಳಲಿದೆ.
ಕೇಂದ್ರ ಮತ್ತು ನಬಾರ್ಡ್ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕಿಗೆ ಹಣದ ಅರಿವು ಕಡಿಮೆಯಾಗಿದ್ದು, ನಬಾರ್ಡ್ ಹೆಚ್ಚುವರಿ ಅಲ್ಪಾವಧಿ ಬೆಳೆ ಸಾಲದ ಬಡ್ಡಿದರ ಹೆಚ್ಚಳವಾಗಿರುವುದರಿಂದ ಡಿಸಿಸಿ ಬ್ಯಾಂಕುಗಳಿಗೆ ಬೆಳೆ ಸಾಲ ನೀಡಲು ಸಮಸ್ಯೆಯಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಕೃಷಿ ಚಟುವಟಿಕೆಗೆ ಹಣದ ಅಗತ್ಯವಿದೆ. ಆದರೆ, ಬೆಳೆ ಸಾಲ ಸಕಾಲಕ್ಕೆ ಸಿಗದೇ ಸಮಸ್ಯೆಯಾಗಿದ್ದು ಖಾಸಗಿ ಲೇವಾದೇವಿದಾರರು ಮತ್ತು ವಾಣಿಜ್ಯ ಬ್ಯಾಂಕುಗಳ ಮೊರೆಹೋಗುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಲಾಗಿದೆ.
ರೈತರಿಗೆ ಡಿಸಿಸಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ. 3 ರಿಂದ 10 ಲಕ್ಷ ರೂಪಾಯಿವರೆಗೆ ಶೇಕಡ 3 ರ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡಲಾಗುವುದು. ಬೆಳೆ ಸಾಲ ನೀಡಲು ನಬಾರ್ಡ್ ಬಿಡುಗಡೆ ಮಾಡುವ ಹಣ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಸಹಕಾರ ಸಂಘಗಳ ಮೂಲಕ ರೈತರಿಗೆ ಸೇರುತ್ತದೆ. ನಬಾರ್ಡ್ ನಿಂದ ಬೆಳೆ ಸಾಲಕ್ಕಾಗಿ ಇನ್ನೂ ಹಣ ಬಿಡುಗಡೆಯಾಗಿಲ್ಲವೆಂದು ಹೇಳಲಾಗಿದೆ.
ಆರ್.ಬಿ.ಐ. ಮಾರ್ಗಸೂಚಿ ಅನ್ವಯ ನಬಾರ್ಡ್ ನಿಂದ ಹೆಚ್ಚುವರಿ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರವನ್ನು ಶೇ. 5.40 ರಿಂದ ಶೇ. 6.60 ಹೆಚ್ಚಳ ಮಾಡಿದ್ದು, ಈ ಹಣದ ಮೇಲೆ ಅಪೆಕ್ಸ್ ಬ್ಯಾಂಕ್ ಶೇಕಡ 0.25 ರಷ್ಟು ಲಾಭಾಂಶವೆಂದು ಬಡ್ಡಿ ವಿಧಿಸುತ್ತದೆ. ಡಿಸಿಸಿ ಬ್ಯಾಂಕುಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಲಾಭಾಂಶದ ಪಾಲಾಗಿ ಶೇಕಡ 2 ರಷ್ಟು ನೀಡುತ್ತವೆ. ರೈತರು ಬೆಳೆ ಸಾಲದ ಬಡ್ಡಿಯನ್ನು ಕಟ್ಟುವುದಿಲ್ಲ. ರಾಜ್ಯ ಸರ್ಕಾರ ರೈತರ ಬದಲಿಗೆ ಡಿಸಿಸಿ ಬ್ಯಾಂಕುಗಳಿಗೆ ಶೇಕಡ 8.60 ರಷ್ಟು ಬಡ್ಡಿ ಪಾವತಿಸುತ್ತದೆ.