ಬೆಂಗಳೂರು: ಐಟಿ ಬಿಟಿ, ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಕೆಲಸಮಾಡುವ ಸಿಬ್ಬಂದಿ ಬಳಿ ಗುರುತಿನಚೀಟಿ ಇರುತ್ತದೆ. ಇಂತಹ ಗುರುತಿನ ಚೀಟಿಯೇ ಇಂತಹ ವ್ಯಕ್ತಿ ಇಂತಲ್ಲಿ ಕೆಲಸ ಮಾಡುತ್ತಾನೆ. ಅವನ ವಿಳಾಸ ಇಂತಹದು ಎಂದು ಹೇಳಿಬಿಡುತ್ತದೆ. ಆದರೆ, ಅನ್ನ ನೀಡುವ ಜೀವದಾತನ ಬಳಿ ಇಂತಹ ಗುರುತಿನ ಚೀಟಿ ಇರದಿದ್ದರೆ ಹೇಗೆ? ಈ ಪ್ರಶ್ನೆಗೆ ಈಗ ಉತ್ತರವೂ ದೊರಕಿದೆ.
ಅಂದ್ಹಾಗೆ ಕೃಷಿ ಇಲಾಖೆ ರೈತ ತಾನೊಬ್ಬ ಸ್ವಾಭಿಮಾನಿ ರೈತ ಎಂದು ಎದೆಯುಬ್ಬಿಸಿ ಹೇಳುವಂತಹ ‘ಸ್ವಾಭಿಮಾನಿ ರೈತ’ ಹೆಸರಿನ ಗುರುತಿನ ಚೀಟಿಯನ್ನು ರೈತರಿಗೆ ನೀಡಲು ಸಜ್ಜಾಗಿದೆ.
ಇಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಮ್ಮ ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದಲೇ ರೈತರಿಗೆ ‘ಸ್ವಾಭಿಮಾನಿ ರೈತ’ ಎನ್ನುವ ಗುರುತಿನಚೀಟಿ ವಿತರಣೆಗೆ ಚಾಲನೆ ನೀಡುತ್ತಿದ್ದಾರೆ. ತಂತ್ರಾಂಶದಲ್ಲಿ ನೋಂದಾಯಿಸಲ್ಪಟ್ಟಿರುವ ರೈತರಿಗೆ ಸ್ವಾಭಿಮಾನಿ ರೈತರ ಗುರುತಿನ ಚೀಟಿ ನೀಡಲಾಗುತ್ತಿದೆ.
‘ಸ್ವಾಭಿಮಾನಿ ರೈತ’ ಗುರುತಿನ ಚೀಟಿ ಎಂದರೇನು?
ರಾಜ್ಯದ ಇ – ಆಡಳಿತ ಇಲಾಖೆಯು ಎನ್.ಐ.ಸಿ ಮೂಲಕ ರಾಜ್ಯದ ರೈತರ ವಿವರಗಳನ್ನು ದಾಖಲಿಸಲು FRUITS ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಪ್ರತಿಯೊಬ್ಬ ರೈತರಿಗೆ ಒಂದು ಪ್ರತ್ಯೇಕ ಗುರುತಿನ ಸಂಖ್ಯೆಯನ್ನು ನೀಡುವುದು FRUITS ತಂತ್ರಾಂಶದಲ್ಲಿ ರೈತರ ನೋಂದಣಿಯ ಉದ್ದೇಶವಾಗಿರುತ್ತದೆ. ಸದರಿ ಗುರುತಿನ ಸಂಖ್ಯೆಯ ಆಧಾರದಲ್ಲಿ ರೈತರು FRUITS ತಂತ್ರಾಂಶ ಬಳಸುವ ಎಲ್ಲಾ ಇಲಾಖೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ. ರೈತರು ಪಡೆಯುವ ಎಲ್ಲಾ ಇಲಾಖೆಗಳ ಸೌಲಭ್ಯಗಳು ಅವರ ಗುರುತಿನ ಸಂಖ್ಯೆಗೆ ಎದುರಾಗಿ ದಾಖಲಾಗುತ್ತದೆ. FRUITS ತಂತ್ರಾಂಶದಲ್ಲಿ ರೈತರ ನೋಂದಣಿಯು ಜೂನ್ 2018 ರಿಂದ ಪ್ರಾರಂಭವಾಗಿದೆ.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗಳಲ್ಲಿ ರೈತರನ್ನು FRUITS ತಂತ್ರಾಂಶದಲ್ಲಿ ನೋಂದಾಯಿಸಲಾಗುತ್ತಿದೆ. FRUITS ತಂತ್ರಾಂಶದಲ್ಲಿ ರೈತರ ನೋಂದಾಣಿಗಾಗಿ ರೈತರ ಗುರುತು, ವಿಳಾಸ, ಭೂ ಹಿಡುವಳಿ, ಆಧಾರ್ ಗುರುತಿನ ಸಂಖ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಎಲ್ಲಾ ಮಾಹಿತಿಯನ್ನಯ FRUITS ನೋಂದಾಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿಯನ್ನು ನೀಡಲು ಪ್ರಸ್ತಾಪಿಸಲಾಗಿದೆ.
ಹಿನ್ನಲೆ: FRUITS ತಂತ್ರಾಂಶವನ್ನು ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಒಂದು ಬಾರಿ ಮಾತ್ರ ರೈತರ ನೋಂದಣಿ ಮಾಡಲು ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಾಂಶದಲ್ಲಿ ಆಧಾರ್ ಕಾರ್ಡ್, ಪಹಣಿ(RTC), ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ರೈತರ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ವಿವರ, ಫೋಟೊ, ಇತ್ಯಾದಿ ದಾಖಲಾತಿಗಳನ್ನು ಪರಿಶೀಲಿಸಿ ರೈತರ ನೋಂದಣಿ ಮಾಡಲಾಗುತ್ತದೆ. ರೈತರ ಹಿಡುವಳಿ ವಿವರವನ್ನು ಕಂದಾಯ ಇಲಾಖೆಯ ‘ಭೂಮಿ’ ತಂತ್ರಾಂಶದಿಂದ ಪಡೆಯಲಾಗುತ್ತದೆ. ಪ್ರತಿ ನೋಂದಾಯಿತ ರೈತರಿಗೂ ಪ್ರತ್ಯೇಕ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಹಾಗೂ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ, ಇಲ್ಲಿಯವರೆಗೆ ರೈತರಿಗೆ ನೋಂದಣಿಯಾದ ನಂತರ ನೀಡಲು ಯಾವುದೇ ನಿರ್ದಿಷ್ಟ ಸ್ವೀಕೃತಿ / ದಾಖಲೆ ಪತ್ರವನ್ನು ನಿಗದಿಪಡಿಸಿರುವುದಿಲ್ಲ, ಯಾವುದೇ ದಾಖಲಾತಿಗಳು ಇಲ್ಲದೆ ನಂತರದ ದಿನಗಳಲ್ಲಿ ಇಲಾಖೆಗಳನ್ನು ಸೌಲಭ್ಯಗಳಿಗಾಗಿ ಸಂಪರ್ಕಿಸಿದಾಗ ನೋಂದಣಿ ಸಂಖ್ಯೆಯನ್ನು ರೈತರು ಬರೆದಿಟ್ಟುಕೊಂಡು, ನೆನಪಿನಲ್ಲಿಟ್ಟುಕೊಂಡು ಸರಿಯಾದ ಸಂಖ್ಯೆಯನ್ನು ನೀಡುವುದು ಕಷ್ಟಸಾಧ್ಯವಾಗುತ್ತದೆ. ಈ ಅನಾನುಕೂಲತೆಯನ್ನು ಪರಿಹರಿಸಲು ವಿವಿಧ ದಾಖಲಾತಿಗಳನ್ನು, ಭೂ ಹಿಡುವಳಿ ವಿವರಗಳನ್ನು ಪರಿಶೀಲಿಸಿ ನೋಂದಾಯಿಸಿದ ರೈತರಿಗೆ FRUITS ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿಯನ್ನು ನೀಡಲು ಪ್ರಸ್ತಾಪಿಸಲಾಗಿದೆ.
ಗುರುತಿನ ಚೀಟಿಯಿಂದೇನು ಲಾಭ?
ಇದರಿಂದ ರೈತರು ಬೆಳೆ ಸಾಲ, ಪಿ.ಎಂ. ಕಿಸಾನ್ ಮುಂತಾದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಕಚೇರಿಗಳಲ್ಲಿ ವ್ಯಯಿಸಬೇಕಾದ ಸಮಯವನ್ನು ಉಳಿಸಬಹುದು ಹಾಗೂ ರೈತರಿಗೆ ಇದು ಒಂದು ವ್ಯವಹಾರಿಕ ಗುರುತಿನ ಚೀಟಿಯಾಗುತ್ತದೆ.
ಯೋಜನೆಯ ಉದ್ದೇಶಗಳೇನು?
ವಿವಿಧ ದಾಖಲಾತಿಗಳನ್ನು ಭೂ ಹಿಡುವಳಿ ವಿವರಗಳನ್ನು ಪರಿಶೀಲಿಸಿ ರೈತರಿಗೆ Fruits ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿಯನ್ನು ನೀಡುವುದರಿಂದ ರೈತರು ಬೆಳೆಸಾಲ, ಪಿಎಂಕಿಸಾನ್ ಮುಂತಾದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಕಛೇರಿಗಳಲ್ಲಿ ವ್ಯಯಿಸಬೇಕಾದ ಸಮಯವನ್ನು ಉಳಿಸಬಹುದು ಹಾಗೂ ರೈತರಿಗೆ ಇದು ಒಂದು ವ್ಯಾವಹಾರಿಕ ಗುರುತಿನ ಚೀಟಿಯಾಗುತ್ತದೆ.
ಈಗಾಗಲೇ ಜ.7 ರಂದು ‘ಕೃಷಿ ಸಂಜೀವಿನಿ’ ಸಸ್ಯ ಚಿಕಿತ್ಸಾ ಸಂಚಾರಿ ವಾಹನಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದ್ದಾರೆ. ಶನಿವಾರ ಸಹ ಕೊಪ್ಪಳಕ್ಕಾಗಿ ವಿಶೇಷವಾಗಿ 20 ಕೃಷಿ ಸಂಜೀವಿನಿ ವಾಹನಗಳನ್ನು ಪ್ರತ್ಯೇಕವಾಗಿ ಲೋಕಾರ್ಪಣೆಗೊಳಿಸುತ್ತಿದ್ದಾರೆ. ಇದೇ ವೇಳೆ ಸ್ವಾಭಿಮಾನಿ ರೈತ ಗುರುತಿನಚೀಟಿಯನ್ನೂ ಸಹ ಲೋಕಾರ್ಪಣೆಗೊಳಿಸುತ್ತಿದ್ದಾರೆ.