ಬೆಂಗಳೂರು: ಅನ್ನದಾತರ ರೈತರ ನೆರವಿಗೆ ಮತ್ತೊಂದು ಕ್ರಮಕೈಗೊಂಡಿರುವ ಸರ್ಕಾರ ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗುವಂತೆ ‘ಇ –ಸಹಮತಿ’ ಆಪ್ ಸಿದ್ದಪಡಿಸಿದೆ. ಶೀಘ್ರವೇ ಈ ಆಪ್ ಲೋಕಾರ್ಪಣೆಗೊಳ್ಳಲಿದೆ.
ರೈತರು ಕೃಷಿ ಉತ್ಪನ್ನಗಳನ್ನು ಎಲ್ಲಿಯಾದರೂ ಮಾರಾಟ ಮಾಡಲು ಮತ್ತು ಖಾಸಗಿ ಕಂಪನಿಗಳ ನಡುವೆ ಸಂಪರ್ಕ ಸಾಧಿಸಲು ಆಪ್ ನಿಂದ ಅನುಕೂಲವಾಗುತ್ತದೆ. ಇ-ಆಡಳಿತ ಇಲಾಖೆ ಎನ್ಐಸಿ ಮೂಲಕ ಈ ಆಪ್ ಸಿದ್ಧಪಡಿಸಲಾಗಿದೆ. ರೈತರು ಎಪಿಎಂಸಿಯಲ್ಲಿ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗದಿದ್ದರೆ ಊರಿನಲ್ಲಿಯೇ ಆಪ್ ಬಳಸಿಕೊಂಡು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು.
ರಿಲಯನ್ಸ್ ಫ್ರೆಶ್, ಫ್ಲಿಪ್ಕಾರ್ಟ್, ನೇಚರ್ ಬಾಸ್ಕೆಟ್, ಬಿಗ್ ಬಾಸ್ಕೆಟ್ ಮೊದಲಾದ ಕಂಪನಿಗಳು ರೈತರನ್ನು ಸಂಪರ್ಕಿಸಿ ಹೆಚ್ಚಿನ ಬೆಲೆಗೆ ಉತ್ಪನ್ನ ಖರೀದಿಸಲು ಅನುಕೂಲವಾಗುತ್ತದೆ.
ಈ ಆಪ್ ನಲ್ಲಿ ರೈತರು ಮತ್ತು ಅವರ ಬೆಳೆಗಳ ಮಾಹಿತಿ ಲಭ್ಯವಿರಲಿದೆ. ನಿರ್ವಹಣೆಗೆ ನೇಮಿಸುವ ಕನ್ವೆಂಟ್ ಮ್ಯಾನೇಜರ್ ಮೂಲಕ ಖಾಸಗಿ ಕಂಪನಿಗಳು ರೈತರನ್ನು ಸಂಪರ್ಕಿಸಬಹುದು. ಬೆಳೆಗಳ ಮಾಹಿತಿ ಗಮನಿಸಿ ಖರೀದಿಗೆ ಆಸಕ್ತಿ ತೋರಿಸಿದ ಕಂಪನಿಗಳು ಕನ್ವೆಂಟ್ ಮ್ಯಾನೇಜರ್ ಸಂಪರ್ಕಿಸಿದರೆ ರೈತರ ಒಪ್ಪಿಗೆ ಪಡೆದು ಕಂಪನಿಗೆ ತಿಳಿಸುತ್ತಾರೆ. ರೈತರ ಒಪ್ಪಿಗೆಯ ನಂತರ ಕಂಪನಿ ರೈತರನ್ನು ಸಂಪರ್ಕಿಸಿ ಉತ್ಪನ್ನ ಖರೀದಿಸಬಹುದು.
ಮನೆಬಾಗಿಲಿಗೆ ಖರೀದಿದಾರರು ಬರಲಿದ್ದು, ರೈತರೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಬಹುದು. ಮಧ್ಯವರ್ತಿಗಳ ಹಾವಳಿಗೆ ಸಂಪೂರ್ಣ ಬ್ರೇಕ್ ಹಾಕಲಾಗುವುದು. ಸಾಗಾಣಿಕೆ ವೆಚ್ಚ ಇರುವುದಿಲ್ಲ. ಮಾರಾಟದ ನಂತರ ಹಣಕ್ಕಾಗಿ ಕಾಯಬೇಕಿಲ್ಲ ಎಂದು ಹೇಳಲಾಗಿದೆ.