ಶಿವಮೊಗ್ಗ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,51,614 ರೈತರಿಗೆ 22,960.26 ಲಕ್ಷ ರೂ. ಕೇಂದ್ರದಿಂದ ಹಾಗೂ 1,42,770 ರೈತರಿಗೆ 8,239.32 ಲಕ್ಷ ರೂ.ರಾಜ್ಯ ಸರ್ಕಾರದಿಂದ ರೈತರ ಖಾತೆಗೆ ನೇರವಾಗಿ ಜಮೆಯಾಗಿರುತ್ತದೆ ಎಂದು ಕೃಷಿ ಜಂಟಿ ನಿರ್ದೇಶಕ ಡಾ.ಕಿರಣ್ಕುಮಾರ್ ತಿಳಿಸಿದ್ದಾರೆ.
ಭಾರತ ಸರ್ಕಾರವು ರೈತರ ಆದಾಯ ವೃದ್ದಿಸಲು 01-02-2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು, ಈ ಯೋಜನೆಯು ಜಮೀನು ಹೊಂದಿರುವ ರೈತರ ಕುಟುಂಬಗಳ ಆರ್ಥಿಕ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.
ಯೋಜನೆಯ ಮಾರ್ಗಸೂಚಿಯಂತೆ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತ(ಸಣ್ಣ, ಅತಿಸಣ್ಣ, ಮಧ್ಯಮ, ದೊಡ್ಡ ರೈತರು) ಕುಟುಂಬಕ್ಕೆ ಒಂದು ವರ್ಷಕ್ಕೆ 6,000 ರೂ.ಗಳನ್ನು ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ 2000 ರೂ. ರಂತೆ ಕೇಂದ್ರ ಸರ್ಕಾರದಿಂದ ಹಾಗೂ 4000 ರೂ. ಗಳನ್ನು 2 ಕಂತುಗಳಲ್ಲಿ. 2000 ರೂ.ರಂತೆ ರಾಜ್ಯ ಸರ್ಕಾರದಿಂದ ಒಟ್ಟು 10,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 10 ಕಂತುಗಳ ಹಣ ರೈತರ ಖಾತೆಗೆ ಜಮೆ ಆಗಿದೆ.
ರೈತರು ಈ ಯೋಜನೆ ಲಾಭ ಪಡೆಯಲು ನೋಂದಣಿಗಾಗಿ ಹತ್ತಿರದ ಗ್ರಾಮ ಪಂಚಾಯ್ತಿ, ಗ್ರಾಹಕ ಸೇವಾ ಕೇಂದ್ರ(ಸಿಎಸ್ಸಿ), ಬಾಪೂಜಿ ಸೇವಾ ಕೇಂದ್ರಗಳು, ಅಟಲ್ಜೀ ಜನಸ್ನೇಹಿ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಕಚೇರಿಗಳಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು, ಜಮೀನು ಖಾತೆ, ಸರ್ವೆ ನಂ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಹಾಗೂ ಇತರೆ ವಿವರಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಿ ನೋಂದಣಿ ಮಾಡಿಸಿಕೊಳ್ಳಬಹುದಾಗಿರುತ್ತದೆ.
ಸಾಂಸ್ಥಿಕ ಭೂಮಿ ಹೊಂದಿರುವವರು, ಮಾಜಿ ಮತ್ತು ಪ್ರಸ್ತುತ ಸಾಂಸ್ಥಿಕ ಹುದ್ದೆ ಹೊಂದಿರುವವರು, ಮಾಜಿ ಮತ್ತು ಪ್ರಸ್ತುತ ರಾಜ್ಯ ಮತ್ತು ಕೇಂದ್ರದ ವಿಧಾನಸಭಾ/ವಿಧಾನಪರಿಷತ್ ಶಾಸಕರು, ಮಾಜಿ/ಹಾಲಿ ಮೇಯರ್ಗಳು, ಜಿ.ಪಂ ಅಧ್ಯಕ್ಷರು, ಮಾಜಿ/ಹಾಲಿ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ ನೌಕರರು, ಮಾಸಿಕ ಪಿಂಚಣಿ 10000 ರೂ.ಪಡೆಯುತ್ತಿರುವವರು(ಡಿ ಗ್ರೂಪ್ ಹೊರತುಪಡಿಸಿ), ಆದಾಯ ತೆರಿಗೆ ಪಾವತಿಸುವ ವ್ಯಕ್ತಿಗಳು, ವೈದ್ಯರು, ಎಂಜಿನಿಯರಂತಹ ವೃತ್ತಿಪರರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಬರುವುದಿಲ್ಲ. ರೈತರು ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದಲ್ಲಿ ನೆರವಿನ ಮೊತ್ತವನ್ನು ವಸೂಲು ಮಾಡುವ ಅಥವಾ ಇತರೆ ಕ್ರಮಗಳನ್ನು ಕಾನೂನಿನ ಪ್ರಕಾರ ಜರುಗಿಸಲಾಗುವುದು.
ಅರ್ಹ ರೈತರ ಪಟ್ಟಿಯನ್ನು FRUITS (Farmer Registration and Unified Beneficiary) ಪೋರ್ಟಲ್ನಲ್ಲಿ ಪಿಎಂ ಎನ್ನುವ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುವುದು. ನೋಂದಣಿಯಾದ ಅರ್ಹ ರೈತರ ಘೋಷಣೆಗಳಿಗೆ ರಾಜ್ಯ ಸರ್ಕಾರದಿಂದ ಎಕ್ಸ್ಎಂಎಲ್ ರಚನೆಯಾಗಿ ಕೇಂದ್ರ ಸರ್ಕಾರದ ಪಿಎಫ್ಎಂಎಸ್ ಮೂಲಕ ರೈತರ ಖಾತೆಗೆ ನೇರವಾಗಿ ಮೂರು ಸಮ ಕಂತುಗಳಲ್ಲಿ 6000 ರೂ.ಜಮೆಯಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಾರ್ಷಿಕವಾಗಿ ಒಟ್ಟು 10000 ರೂ.ಹಣ ರೈತರ ಖಾತೆಗೆ ಜಮಾ ಆಗುವುದು. ಜಿಲ್ಲೆಯ ಅರ್ಹ ರೈತರು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.