ನವದೆಹಲಿ: ಕಾರ್ಮಿಕರ ರಾಜ್ಯ ವಿಮಾ ನಿಗಮ ಪಿಂಚಣಿ ಯೋಜನೆಯ ಪ್ರಯೋಜನವನ್ನು ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ವಿಸ್ತರಿಸಲಾಗುವುದು. ದುಡಿಯುವ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಆರ್ಥಿಕ ಸಂಕಷ್ಟ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಮೃತ ಕಾರ್ಮಿಕನ ಒಂದು ದಿನದ ಸರಾಸರಿ ವೇತನದ ಶೇಕಡ 90 ರಷ್ಟು ಪಿಂಚಣಿ ರೂಪದಲ್ಲಿ ನೀಡಲಾಗುವುದು. ಕಳೆದ ವರ್ಷ ಮಾರ್ಚ್ 24 ರಿಂದ ಅನ್ವಯವಾಗುವಂತೆ ನಿಯಮ ಜಾರಿಗೆ ಬರಲಿದ್ದು, 2022 ರ ಮಾರ್ಚ್ 24 ರ ವರೆಗಿನ ಪ್ರಕರಣಗಳಿಗೆ ಅನ್ವಯವಾಗಲಿದೆ.
ನೌಕರರ ಠೇವಣಿ ಆಧಾರಿತ ವಿಮೆ ಯೋಜನೆಯಲ್ಲಿ ಗರಿಷ್ಠ ವಿಮಾ ಮೊತ್ತವನ್ನು 7 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಕೊರೊನಾದಿಂದ ಮೃತಪಟ್ಟವ ಕಾರ್ಮಿಕರ ಕುಟುಂಬಗಳಿಗೆ ನೆರವಾಗಲಿದೆ ಎಂದು ಪ್ರಧಾನ ಮಂತ್ರಿಯವರ ಕಚೇರಿ ಮಾಹಿತಿ ನೀಡಿದೆ. ಕಾರ್ಮಿಕ ಸಚಿವಾಲಯ ಯೋಜನೆ ಕುರಿತ ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಲಿದೆ.