ಆನ್ಲೈನ್ ಟ್ರಾನ್ಸಾಕ್ಷನ್ ಬಂದ ಬಳಿಕ ವಂಚಕರು ಗೊತ್ತೇ ಆಗದಂತೆ ಖಾತೆಯಲ್ಲಿದ್ದ ಹಣ ಎಗರಿಸುತ್ತಾರೆ. ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ ಎಂದು ಒಟಿಪಿ, ಪಾಸ್ವರ್ಡ್ ಕೇಳಿ ಅದನ್ನು ಬಳಸಿಕೊಂಡು ವಂಚಕರು ಖಾತೆಯಿಂದ ಹಣ ಎಗರಿಸಿದ ಹಲವಾರು ಪ್ರಕರಣ ನಡೆದಿದೆ. ಈಗ ಫಿಂಗರ್ ಪ್ರಿಂಟ್ ಮೂಲಕವೂ ವಂಚಕರು ಹಣ ದೋಚುತ್ತಾರೆ. ಹೀಗೆ ಹಣ ಕಳೆದುಕೊಂಡವರೊಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ…
ದಯವಿಟ್ಟು ಪೂರ್ತಿ ಓದಿ… ಈ ಪೋಸ್ಟ್ ನಿಮ್ಮೆಲ್ಲರಿಗಾಗಿ
ಸೆಪ್ಟೆಂಬರ್ ತಿಂಗಳ ಸಂಬಳ ಇವತ್ತು ಬೆಳಿಗ್ಗೆ 10.49ಕ್ಕೆ ನನ್ನ ಅಕೌಂಟ್ ಗೆ ಬಂತು. ತಿಂಗಳ ಸಂಬಳ ಜಮೆ ಆಗುವುದು ಮಾಮೂಲಿ.ವಿಶೇಷ ಏನು? ಮುಂದೆ ಓದಿ.
ಸ್ಕೂಲ್ ವಿಸಿಟ್ ಮುಗಿಸಿ ಆಫೀಸ್ ಗೆ ಬಂದು ಕೆಲಸದಲ್ಲಿ ತೊಡಗಿದ್ದೆ .13.46 ಕ್ಕೆ ತಟ್ಟಂತ ಒಂದು ಎಸ್ ಎಂ ಎಸ್ ಬಂತು .
ನಿಮ್ಮ ಅಕೌಂಟ್ ನಿಂದ 10,000 ರೂಪಾಯಿ ಡೆಬಿಟ್ ಆಗಿದೆ
ಎಲಾ , ನಾನು ಬೆಳಗಿನಿಂದ ಯಾವ ಪೇಮೆಂಟ್ ಯಾರಿಗೂ ಮಾಡಿಲ್ಲ ಇದ್ಯಾವುದು ಮತ್ತೆ ಎನಿಸಿ ಗೂಗಲ್ ಪೇ, ಕೆನರಾ ಬ್ಯಾಂಕ್ ಮೊಬೈಲ್ ಆಪ್ ಗಳ ತೆರೆದು transaction history ಪರಿಶೀಲಿಸಿದೆ.ಏನೂ ಇಲ್ಲ.
ಮೊಬೈಲ್ ಬ್ಯಾಂಕಿಂಗ್ ಆಪ್ ಮೂಲಕವೇ ಇ ಪಾಸ್ ಪುಸ್ತಕ ತೆರೆದು ಇಂದಿನ ವ್ಯವಹಾರ ನೋಡಿದರೆ 10,000 ರೂಪಾಯಿ AEP ಮೂಲಕ withdrawಆಗಿದೆ ಎಂದಿತ್ತು.
ಅದರ ಕೆಳಗೆ 36 ರೂ ಫೀ ಸಹ ಕಡಿತವಾಗಿತ್ತು.
ಬ್ಯಾಲೆನ್ಸ್ ಚೆಕ್ ಮಾಡಿದರೆ ಹತ್ತು ಸಾವಿರ ಕಡಿಮೆ ಆಗಿದೆ!.
ತಲೆಯಲ್ಲಿ ಏನೇನೋ ಹುಳು.ಮೊನ್ನೆ PDF CONVERTERನ upgrade ಮಾಡಲು ನನ್ನ ಸಿಸ್ಟಂ ನಲ್ಲಿ ಡೆಬಿಟ್ ಕಾರ್ಡ್ ನಂಬರ್, ಸಿವಿವಿ ಎಲ್ಲಾ ಕೊಟ್ಟು ಒಟಿಪಿನೂ ಹಾಕಿ ಕೊನೆಗೆ transaction failure ಆಗಿತ್ತಲ್ಲ ಅದರಿಂದೇನಾದ್ರೂ ಮೋಸ ಆಯ್ತ?
ಕೊರಿಯರ್ ಕಳಿಸುವಾಗ ಆಧಾರ್ ನ ಜೆರಾಕ್ಸ್ ಕೊಟ್ಟಿದ್ಲ್ಲ ಅದೇನಾದ್ರೂ ದುರುಪಯೋಗ ಆಯ್ತ???
ಕೂಡಲೇ ಎದ್ದು ಆಫೀಸ್ ನ ಪಕ್ಕದ ರಸ್ತೆಯಲ್ಲಿರೋ ಬ್ಯಾಂಕ್ ನ ಬ್ರಾಂಚ್ ಗೆ ಹೋದೆ.
ಓಟಿಪಿ ಬಂದಿತ್ತಾ? ಅದನ್ನ ಯಾರಿಗಾದ್ರೂ ಕೊಟ್ಟಿದ್ರಾ?
ಯಾವುದಾದರೂ unknown link open ಮಾಡಿದ್ರಾ ? ಯಾವುದಾದರೂ unknown call ರಿಸೀವ್ ಮಾಡಿದ್ರಾ ಎಂದು ಕೇಳುತ್ತಲೇ ನನ್ನ ಖಾತೆಯ ವಿವರ ಪರೀಕ್ಷಿಸಿದರು.
ಎಲ್ಲದಕ್ಕೂ ಇಲ್ಲ ಇಲ್ಲ ಎನ್ನುತ್ತಿದ್ದಂತೆ ತಟ್ಟಂತ ನೆಟ್ಟಗೆ ಕೂತ ಬ್ಯಾಂಕ್ ಸಿಬ್ಬಂದಿ ಇದು 100% fraud case.ಈಗಲೇ customer care ಗೆ ಫೋನ್ ಮಾಡಿ ನಿಮ್ಮ ಅಕೌಂಟ್ ಲಾಕ್ ಮಾಡಿಸಿ ಎಂದರು.
ಕೂಡಲೇ ಆ ಕೆಲಸ ಮಾಡಿದೆ.
ಏನಾಯ್ತು ? ಯಾರಿಗೆ ಹೋಗಿದೆ ದುಡ್ಡು? ಎಂದೆ
FIR ಮಾಡಿಸಿ ಅದರ ಒಂದು ಕಾಪಿಯನ್ನು ಬೇಸ್ ಬ್ಯಾಂಚ್ ಗೆ ಕೊಡಿ ನಾಳೆ .ಎಂದರು
ಸರಿ ಮತ್ತೆ ಆಪೀಸ್ ಗೆ ಬಂದವಳಿಗೆ ಇತ್ತೀಚೆಗೆ ಮೈಲ್ ನಲ್ಲಿ your adhaar authentication failed ಎಂದು ಆಗಾಗ ಬರುತ್ತಿದ್ದುದು ನೆನಪಾಯ್ತು.ಆಗದಕ್ಕೆ ಹೆಚ್ಚಿನ ಗಮನ ಕೊಟ್ಟಿರಲಿಲ್ಲ. ಈಗ ಹೊಳೆಯಿತು.ತಟ್ಟನೆ ಮೈಲ್ ಬಾಕ್ಸ್ ತೆರೆದೆ.
Your adhar authentication is successful with FINGERPRINT on 03/10/2023 at 13.46 ಎಂದು ಮೈಲ್ ಬಂದಿತ್ತು.
ಕೂಡಲೇ ಅದನ್ನ ವಾಟ್ಸಪ್ ಫ್ಯಾಮಿಲಿ ಗ್ರೂಪ್ ಲಿ ಹಾಕಿ ತಣ್ಣಗೆ ಕುಳಿತೆ.
ಅತ್ತಲಿಂದ ಮಗನ ಮೆಸೇಜು
ಅಮ್ಮಾ ನಿನ್ನ FINGERPRINT ಬಳಸಿದ್ದಾರೆ.
ಅರೆ ನನ್ನ ಈ ಫಿಂಗರ್ ನನಗೇ ಗೊತ್ತಿಲ್ಲದೆ ಅದು ಯಾವಾಗ ,ಯಾರ ಬಳಿ ,ಎಲ್ಲಿಗೆ ಹೋಗಿತ್ತು?
ಮತ್ತೆ ಮೈಲ್ ತೆರೆದು ಓದಿದೆ .ಮಗ ಸರಿಯಾಗೇ ಹೇಳಿದ್ದ. ಆ ಮೈಲ್ ನ ಪ್ರಿಂಟ್ ತೆಗೆದು ಕಂಪ್ಲೇಂಟ್ ಕಾಪಿಯ ಜೊತೆಗಿರಿಸಿದೆ.
ಹಿರಿಯ ಸಹೋದ್ಯೋಗಿ ಅಶೋಕ್ ರವರನ್ನ ಕರೆದುಕೊಂಡು ಪಕ್ಕದಲ್ಲೇ ಇದ್ದ ಪೊಲೀಸ್ ಸ್ಟೇಷನ್ ಗೆ ಹೋದೆ.
ಕೆಂಚಾರ್ಲಹಳ್ಳಿಯಲ್ಲಿದ್ದಾಗ ಶಾಲೆಯ ವಿಚಾರಕ್ಕೆ ಕರೆಯಲು ಒಮ್ಮೆ ಹೋಗಿದ್ದೆನಷ್ಟೆ.ಇಲ್ಲಿ ಬೆಂಗಳೂರಿನ ಮಧ್ಯಭಾಗದಲ್ಲಿ ಇಷ್ಯದೊಡ್ಡ ಸ್ಟೇಷನ್ ಕಾಲಿರಿಸುವಾಗ ಹಿಂಜರಿದದ್ದು ಸುಳ್ಳಲ್ಲ..
ಅಲ್ಲಿದ್ದ ಜನ ಜಂಗುಳಿ, ಪುರುಷರ ,ಮಹಿಳೆಯರ ಬಂಧೀಖಾನೆ…ಕ್ಷಣ ಮನಸ್ಸು ಕಸಿವಿಸಿಗೊಂಡಿತು.
ಚುನಾವಣೆಯ ಸಮಯದಲ್ಲಿ FST ತಂಡದಲ್ಲಿ ಅಶೋಕ್ ರ ಜೊತೆ ಕೆಲಸ ಮಾಡಿದ್ದ ಅಧಿಕಾರಿಯೊಬ್ಬರು ಎದುರಾಗಿ ಪರಿಚಯದ ನಗೆ ಬೀರಿದರು.ವಿಷಯ ಕೇಳಿ ನೇರ ಸರ್ಕಲ್ ಇನ್ಸ್ಪೆಕ್ಟರ್ ಚೇಂಬರಿಗೆ ಕರೆದೊಯ್ದರು.
ಅಲ್ಲಿದ್ದ ಇಬ್ಬರು ಮಹಿಳೆಯರನ್ನು ಮಾತನಾಡಿಸಿ ಕಳಿಸಿ ನಮ್ಮನ್ನು ಕುಳಿತುಕೊಳ್ಳಲು ಹೇಳಿದವರು ಸಮಾಧಾನದಿಂದ ವಿಚಾರ ಕೇಳಿ ನಾ ಕೊಟ್ಟ ದಾಖಲೆ,ಪತ್ರ ನೋಡಿ ಇದು ಇತ್ತೀಚೆಗೆ ಜಾಸ್ತಿ ಆಗಿದೆ.ಬೆಳಗಿನಿಂದ ಮೂರ್ನಾಲ್ಕು ಜನ ಹೀಗೇ ಬಂದಿದ್ರು ಎನ್ನುತ್ತಾ FIR ದಾಖಲಿಸಲು ಅವರ ಸಿಬ್ಬಂದಿಯನ್ನು ಕರೆದರು.
ಹಾಗಾದ್ರೆ FIR ಮಾಡೋಣ್ವ ? ಅಕೆ ಕೇಳಿದ್ರು .
ಅದಕ್ಕಾಗೇ ಅಲ್ಲಿಗೆ ಹೋಗಿದ್ದವಳು ಕ್ಷಣ ಅನುಮಾನಿಸಿದೆ.
ಈಗ FIR ಆದ್ರೆ ಮುಂದೆ ಏನು? ಓಡಾಟ ಇರುತ್ತಾ ? ಕೇಳಿದೆ.
ಅವಶ್ಯಕತೆ ಬಂದಾಗ ಓಡಾಡ ಇರುತ್ತೆ. ಲಾಯರ್ ಕೋರ್ಟ್ ಇವೆಲ್ಲ ಇದ್ದದ್ದೇ ಅಲ್ವ ಎಂದರು.
ನಿಜಕ್ಕೂ ಈ ಓಡಾಟ ,ಒತ್ತಡಗಳಿಗೆ ನಾನು ಮಾನಸಿಕವಾಗಿ, ದೈಹಿಕವಾಗಿ ಸಮರ್ಥಳಿದ್ದೇನಾ? ವರ್ಷಗಟ್ಟಳೆ ಕಾಡಿ ನರಳಿಸಿ ಈಗಷ್ಟೆ ಪರವಾಗಿಲ್ಲ ಎನ್ನುತ್ತಿರುವ ಆರೋಗ್ಯ ಇದನ್ನೆಲ್ಲ ತಡೆಯಬಲ್ಲುದೆ? ಇರುವುದು ಒಂದೆ ಜನ್ಮ ಅದೂ ಇನ್ನು ಕೆಲವೇ ವರ್ಷಗಳು (ಆಶಾವಾದ) ಇದೆಲ್ಲ ಬೇಡ ಎನಿಸಿ
ಇಲ್ಲ ನಾಮು FIR ಮಾಡುವುದಿಲ್ಲ ಎಂದೆ.
ನೋಡಿ ನೀವು ಮಾಡುವುದೇ ಆದರೆ ಈಗಲೇ ಮಾಡುತ್ತೇವೆ.ನಮ್ಮ ಕೆಲಸವೇ ಅದು ಎಂದರು .
ಇಲ್ಲ ನನಗಷ್ಟು ಶಕ್ತಿಯಿಲ್ಲ ಎಂದು ಹೇಳಿ ಕೊನೆಗೆ ಹಣದ ಭದ್ರತೆ ಹೇಗೆ ಎಂದೆ.
ಆಧಾರ್ ಕಾರ್ಡ್ ನ ಡಿಜಿಟಲ್ ಲಾಕ್ ಮಾಡಿಸಿ ಎಂದರು.
FIR ಮಾಡಿಸದೆ ಹಾಗೇ ಬಂದದ್ದು ಸರಿಯೋ ತಪ್ಪೋ ಯೋಚಿಸುತ್ತಾ ನನ್ನ ನಿರ್ಧಾರಕ್ಕೆ ನಾನೇ ಕಾರಣಗಳನ್ನು ಕೊಟ್ಟು ಸಮರ್ಥಿಸಿಕೊಳ್ಳುತ್ತಾ ಆಫೀಸ್ ಗೆ ಮರಳಿದೆ.
ಬಹುತೇಕ ಸಹೋದ್ಯೋಗಿಗಳೆಲ್ಲರ ಬಾಯಲ್ಲಿ ಇದೇ ವಿಷಯ.
ಹತ್ತು ಸಾವಿರ ಚಿಕ್ಕ ಮೊತ್ತವೇನಲ್ಲ.ಆದರೆ ಇಷ್ಟು ವರ್ಷಗಳ ಜೀವನದಲ್ಲಿ ಕಳೆದುಕೊಂಡದ್ದನ್ಮೆಲ್ಲ ನೆನೆದರೆ ಹಣಕ್ಕಾಗಿ ನೆಮ್ಮದಿ ಕೆಡಿಸಿಕೊಳ್ಳುವವಳು ನಾನಲ್ಲ!
ಆದರೆ ಹಣ ಕಳೆದ ರೀತಿ ತಲೆ ಬಿಸಿ ಮಾಡಿತ್ತು.ಹೀಗಾದರೆ ಹೇಗೆ? ನಮ್ಮ ಹಣ ನಮ್ಮದೇ ದುಡಿತದ ಹಣ ಭದ್ರವಾಗಿರಿಸುವುದಾದರೂ ಹೇಗೆ? ಆಧಾರ್ ಕಾರ್ಡ್ ಏಕೆ ಈ ಬ್ಯಾಂಕ್ ಗಳಲ್ಲಿ ಕಡ್ಡಾಯವಾಗಿ ಅಕೌಂಟ್ ಗೆ ಲಿಂಕ್ ಮಾಡಬೇಕು? ಇಂತಹ ಮೋಸಗಳಿಂದ ಹೇಗೆ ತಪ್ಪಿಸಿಕೊಳ್ಳುವುದು?
ಮೋಸ ಹೋಗುವುದೇ ಬೇರೆ
ಮೋಸ ಆಗುವುದೇ ಬೇರೆ.
ಇದೇ ಯೋಚನೆಯಲ್ಲಿ ಮೆಟ್ರೊ ಹತ್ತಿದೆ.
ಮನೆಗೆ ಬರುತ್ತಿದ್ದ ಹಾಗೇ ಮಗ ನಾಲ್ಕು ಪೇಜಿನ PDF ಕಳಿಸಿದ್ದ .ಸೆಪ್ಟೆಂಬರ್ ತಿಂಗಳಲ್ಲಿ 27 ಸಲ ಬಯೋಮೆಟ್ರಿಕ್ ಮೂಲಕ ಬೇರೆ ಬೇರೆ ಬ್ಯಾಂಕುಗಳಲ್ಲಿ ನನ್ನ ಖಾತೆ ಇದೆಯ ಎಂದು ವಂಚಕರು ಜಾಲಾಡಿದ್ದರು.
ಕೊನೆಗೆ ಇಂದು ಕೆನರಾ ಬ್ಯಾಂಕ್ ನಲ್ಲಿ ಯಶಸ್ವಿಯಾಗಿ ಹಣ ಸೆಳೆದಿದ್ದಾರೆ.
ಮಗ ಸೈಬರ್ ಕ್ರೈಂ ಗೆ ದೂರು ದಾಖಲಿಸಿದ್ದಾನೆ .
ನಮ್ಮೆಲ್ಲರ ಆಧಾರ್ ನ ಬಯೋಮೆಟ್ರಿಕ್ ಲಾಕ್ ಮಾಡಿಸಿದ್ದಾನೆ.
ದಿನವೂ ಬಗಬಗೆಯಲ್ಲಿ ವಂಚನೆಯಾಗುವುದರ ಬಗ್ಗೆ ವಂಚನೆಗೊಳಿಸುವುದರ ಬಗ್ಗೆ ಓದಿಕೇಳಿ ತಿಳಿದುಕೊಳ್ಳುವ ನನಗೆ ಇವತ್ತು ಹೀಗೆ ಮೋಸವಾಯ್ತು.
ಈ ಮೋಸ ಇತರರಿಗೂ ಆಗಬಾರದೆಂಬ ಉದ್ದೇಶದಿಂದ ಇಲ್ಲಿ ಹಂಚಿಕೊಳ್ಳುತ್ತಿರುವೆ .
ಇನ್ನೊಂದು ವಿಷಯ .ಕೆನರಾ ಬ್ಯಾಂಕ್ ಅಕೌಂಟ್ ಲಿ ಹಣ ಹೋಯ್ತೆಂದು ಲಾಕ್ ಮಾಡುವ ಮುನ್ನ ನನ್ನ ಇಡೀ ಸಂಬಳವನ್ನು IOB ಯ ಖಾತೆಗೆ ಗೂಗಲ್ ಪೇ ಮೂಲಕ ವರ್ಗಾಯಿಸಿದ್ದೆ.
ಮನೆಗೆ ಬಂದರೆ ಹಸಿವು, ತಲೆಸಿಡಿತ .ಏನಾದರೂ ಮಾಡಿಕೊಳ್ಳಲೂ ಮನಸಿಲ್ಲದ ಮನಸ್ಥಿತಿ
ಅಮ್ಮಾ ನೀನಿರೋದು ಬೆಂಗಳೂರಲ್ಲಿ ಸ್ವಿಗ್ಗಿಲಿ ಆರ್ಡರ್ ಮಾಡು ತರಿಸ್ಕೊ ಎಂದು ಮಗ ಜೋರಾಗಿ ಹೇಳಿದೆ.
ಆರ್ಡರ್ ಮಾಡಿ ಗೂಗಲ್ ಪೇ ಮಾಡಲು ಹೋದರೆ transaction limit reached .payment failed ಎನ್ನಬೇಕೆ?
ದುಡ್ಡು ಮೊದಲೇ ಕೊಡದೆ ಯಾರು ಊಟ ಕಳಿಸುತ್ತಾರೆ?
ಅನ್ನಕ್ಕಿಟ್ಟು ಮೊಸರನ್ನ ತಿನ್ನುವೆ ಎಂದೆ.
ಮಗ ಬೈದು ಚಂಡೀಗಢದಲ್ಲಿ ಕೂತು ವೆಜ್ ಬಿರಿಯಾನಿ ತರಿಸಿಕೊಟ್ಟ.
ಅಮ್ಮಾ ನಾನು ಅಪ್ಪ ಇಬ್ರೂ ಅಲ್ಲಿಲ್ಲ
ಒಬ್ಳೇ ಅದೇನು ಮಾಡ್ಕೋತೀಯೊ ಎನ್ನುವ ಅವನ ಮಾತು ನಾಡಿಗ್ ಹೇಳಿದ ಸಮಾಧಾನ , ಬಿಸಿಬಿಸಿ ವೆಜ್ ಬಿರಿಯಾನಿ ತಲೆ ಹೊಟ್ಟೆ ಎರಡನ್ನೂ ತಣ್ಣಗಾಗಿಸಿತು.
ಇಷ್ಟೆಲ್ಲಾ ಓದಿದಿರಾ?
ಈ ಕೂಡಲೇ ನಿಮ್ಮ ಆಧಾರ್ ನ ಬಯೋಮೆಟ್ರಿಕ್ ಲಾಕ್ ಮಾಡಿ.ನಿಮ್ಮ ಶ್ರಮದ ದುಡಿಮೆ ವಂಚಕರ ಪಾಲಾಗುವುದು ಬೇಡ.
ಈ ಬಗ್ಗೆ ಕೇವಲ ಸೈಬರ್ ಕ್ರೈಂ ಗೆ ಕಂಪ್ಲೇಂಟ್ ಕೊಟ್ಟು ಸುಮ್ಮನಾಗದೆ ನಾನು ಇನ್ನೂ ಬೇರೆ ದಾರಿ ಖಂಡಿತಾ ಹುಡುಕುವೆ .ಸುಮ್ಮನಿರಲಾರೆ
ನಿಮ್ಮ ತಾಳ್ಮೆಗೆ ನಮಸ್ಕಾರ
—++ ದೇವಯಾನಿ
ಅಂದಹಾಗೆ ಆನ್ಲೈನ್ ವ್ಯವಹಾರ ಬಂದ ನಂತರ ಎಷ್ಟೊಂದು ಅನುಕೂಲಗಳಿವೆಯೋ ಅಷ್ಟೇ ಆತಂಕ ಗ್ರಾಹಕರಲ್ಲಿದೆ. ಖಾತೆಯಲ್ಲಿರುವ ಹಣಕ್ಕೂ ಭದ್ರತೆಯೇ ಸವಾಲಾಗಿದೆ ಎಂಬ ಚರ್ಚೆಗಳು ನಡೆದಿವೆ.
https://m.facebook.com/story.php?story_fbid=pfbid0xpezNiWgNHxq1oWb2wa55HM746KveBDRrzzBBf29oUU4KbJx5zPJVyKdwajjymuMl&id=100004557793493&mibextid=Nif5oz