ನವದೆಹಲಿ: ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಆ್ಯಪ್‌ನ್ನು ಕೆಲ ಕಾಲ ತೆಗೆದು ಹಾಕಲಾಗಿತ್ತು. ಈಗ ಮತ್ತೆ ಅಪ್ ಡೇಟ್ ಹಾಗೂ ಡೌನ್ಲೋಡ್ ಗೆ ಲಭ್ಯವಾಗಿದೆ ಎಂದು ಪೇಟಿಎಂ ಟ್ವೀಟ್ ಮಾಡಿದೆ.
ಜೂಜು ಪ್ರಚೋದಿಸುವ ಆ್ಯಪ್ ಗಳಿಗೆ ಅವಕಾಶವಿಲ್ಲ ಎಂಬ ಲೇಖನ ಪ್ರಕಟಿಸಿದ್ದ ಗೂಗಲ್ ಶುಕ್ರವಾರ ಪೇಟಿಎಂನ್ನು ಪ್ಲೇ ಸ್ಟೋರ್ ನಿಂದ ತೆಗೆದಿತ್ತು. ಪೇಟಿಎಂ ಕೂಡ ಟ್ವೀಟ್ ಮಾಡಿ, ಕೆಲ ಕಾಲ ಆ್ಯಪ್ ಡೌನ್ ಲೋಡ್ ಗೆ ಲಭ್ಯವಿಲ್ಲ ಎಂದಿತ್ತು.
ಹಣದ ವಹಿವಾಟು ನಡೆಸುವ ಆ್ಯಪ್ ಇದಾಗಿದ್ದರಿಂದ ನಮ್ಮ ಖಾತೆ ಎಷ್ಟು ಸುರಕ್ಷಿತ ಎಂದು ಜನರಿಗೆ ಆತಂಕ ಹುಟ್ಟಿತ್ತು. ಆದರೆ, ಕೆಲವೇ ಕ್ಷಣದಲ್ಲಿ ತಾನು ಮರಳಿದ ಬಗ್ಗೆ ಪೇಟಿಎಂ ಮರು ಟ್ವೀಟ್ ಮಾಡಿದೆ.
“ನಮ್ಮ ಆ್ಯಂಡ್ರಾಯ್ಡ್ ಆ್ಯಪ್ ಅನ್ನು ಪುನರ್ ಸ್ಥಾಪಿಸುವುದಕ್ಕಾಗಿ ನಾವು ಗೂಗಲ್ ಜತೆ ಕೆಲಸ ಮುಂದುವರಿಸಿದ್ದೇವೆ. ನಿಮ್ಮ ಹಣ ಹಾಗೂ ಪೇಟಿಎಂ ಜತೆ ಲಿಂಕ್ ಆಗಿರುವ ಖಾತೆ ಸಂಪೂರ್ಣ ಸುರಕ್ಷಿತವಾಗಿದೆ. ಆ್ಯಪ್ ನ ಎಲ್ಲ ಸೇವೆಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದ್ದು ಈ ಹಿಂದಿನಂತೆ ಪೇಟಿಎಂ ಬಳಕೆ ಮುಂದುವರಿಸಿ ನಾವು ಅಪ್‌ಡೇಟ್ ಆಗಿ ಮರಳಿದ್ದೇವೆʼʼ ಎಂದು ಪೇಟಿಎಂ ಕಂಪನಿ ಟ್ವಿಟರ್ ನಲ್ಲಿ ಹೇಳಿದೆ
ಐಪಿಎಲ್ ಬೆಟ್ಟಿಂಗ್ ಗೆ ಪೇಟಿಎಂ ಪ್ರಚೋದಿಸುತ್ತಿದೆ ಎಂದು ಆರೋಪಿಸಿದ್ದ ಗೂಗಲ್ ಭಾರತದಲ್ಲಿ ಜೂಜು ನಿಯಂತ್ರಣ ಕುರಿತು ಉದ್ದದ ಲೇಖನ ಪ್ರಕಟಿಸಿತ್ತು. ಪೇಟಿಎಂ ಹೊರಗಿಡಲು ಇದು ಒಂದು ಅಂಶವಾದರೆ, ಗೂಗಲ್ ಕಂಪನಿಯ ಹಣಕಾಸು ವಹಿವಾಟು ಆ್ಯಪ್ “ಗೂಗಲ್ ಪೇ” ಗೆ ದೊಡ್ಡ ಸ್ಪರ್ಧೆ ಒಡ್ಡುತ್ತಿರುವುದು ಪೇಟಿಎಂ. ಅದನ್ನು ನಿಯಂತ್ರಿಸಲು ಗೂಗಲ್ ಮುಂದಾಗಿದೆ ಎಂದು ನೆಟ್ ಪಂಡಿತರು ವಿಶ್ಲೇಷಿಸಿದ್ದಾರೆ.