ನವದೆಹಲಿ: ಮಾನಸಿಕ ಅನಾರೋಗ್ಯಕ್ಕೆ ಕೂಡ ನ್ಯಾಯಬದ್ಧವಾಗಿ ವಿಮೆ ಪರಿಹಾರ ದೊರಕಿಸಿಕೊಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿಮೆ ಕಂಪನಿಗಳು ವಿಮೆ ಪರಿಹಾರ ನೀಡುವ ಸಂದರ್ಭದಲ್ಲಿ ಸಂತ್ರಸ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯದ ವಿಷಯದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಲಾಗಿದೆ.
ಮಾನಸಿಕ ಅನಾರೋಗ್ಯಕ್ಕೆ ನ್ಯಾಯಬದ್ಧವಾದ ವಿಮೆ ಪರಿಹಾರ ನೀಡಬೇಕು ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ. ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ನಿಂದ ವಿಮೆ ನಿಯಂತ್ರಕ ಸಂಸ್ಥೆ IRDAI ಗೆ ಈ ಕುರಿತಾಗಿ ಸೂಚನೆ ನೀಡಲಾಗಿದೆ.
ಮಾನಸಿಕ ಅನಾರೋಗ್ಯಕ್ಕಾಗಿ ಮ್ಯಾಕ್ಸ್ ಬುಪಾ ಹೆಲ್ತ್ ಇನ್ಸೂರೆನ್ಸ್ ವಿಮೆ ಕಂಪನಿ 50,000 ರೂಪಾಯಿ ಪರಿಹಾರ ನೀಡಿದ್ದು, ತಾವು 35 ಲಕ್ಷ ರೂಪಾಯಿ ವಿಮೆಗೆ ಪ್ರೀಮಿಯಂ ಪಾವತಿಸುತ್ತಿರುವುದರ ಬಗ್ಗೆ ವ್ಯಕ್ತಿ ತಿಳಿಸಿದ್ದರು. ತಮ್ಮ ಮಾನಸಿಕ ಸಮಸ್ಯೆ ಚಿಕಿತ್ಸೆಗೆ ಕೇವಲ 50 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದು ವ್ಯಕ್ತಿ ಕೋರ್ಟ್ ಮೊರೆ ಹೋಗಿದ್ದು, ದೆಹಲಿ ಹೈಕೋರ್ಟ್ ಮಾನಸಿಕ ಅನಾರೋಗ್ಯಕ್ಕೆ ನ್ಯಾಯಬದ್ಧ ವಿಮೆ ಪರಿಹಾರ ನೀಡುವಂತೆ ತಿಳಿಸಿ ವಿಚಾರಣೆಯನ್ನು ಜೂನ್ 2 ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಪ್ರತಿಬಾ ಎಂ. ಸಿಂಗ್ ಅವರು, 2017 ರ ಮಾನಸಿಕ ಆರೋಗ್ಯ ಕಾಯ್ದೆ ‘ಮಾನಸಿಕ ಕಾಯಿಲೆಗಳು ಮತ್ತು ದೈಹಿಕ ಕಾಯಿಲೆಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಒದಗಿಸಲಾದ ವಿಮೆಯ ನಡುವೆ ಯಾವುದೇ ತಾರತಮ್ಯವನ್ನು ಹೊಂದಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸುತ್ತದೆ ಎಂದು ಹೇಳಿದ್ದಾರೆ.