ದಾವಣಗೆರೆ: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮೇ. 12 ರವರೆಗೆ ಕಠಿಣ ನಿರ್ಬಂಧಗಳನ್ನು ಹೇರಿದ್ದು, ಪರಿಸ್ಥಿತಿಯ ದುರ್ಬಳಕೆಗೆ ಜನರಿಗೆ ಅಗತ್ಯವಿರುವ ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರನ್ನು ಪತ್ತೆಹಚ್ಚಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಕೋವಿಡ್ ಸಂಬಂಧಿಸಿದಂತೆ ಸರ್ಕಾರದ ನೂತನ ಮಾರ್ಗಸೂಚಿ ಹಾಗೂ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೋವಿಡ್‍ನ 2ನೇ ಅಲೆ ನಿಯಂತ್ರಿಸಿ, ಸೋಂಕು ವ್ಯಾಪಕವಾಗಿ ಹರಡುವ ಚೈನ್‍ಲಿಂಕ್ ಮುರಿಯಲು, ಸರ್ಕಾರ ಮೇ. 12 ರವರೆಗೆ ಕಠಿಣ ನಿರ್ಬಂಧ ವಿಧಿಸಿದೆ, ಅಲ್ಲದೆ ಜಿಲ್ಲೆಯಾದ್ಯಂತ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
ಸಾರ್ವಜನಿಕರು ದಿನಬಳಕೆಯ ಅಗತ್ಯ ವಸ್ತು, ಆಹಾರ ಸಾಮಗ್ರಿ, ತರಕಾರಿ ಹೂವು ಹಣ್ಣು ಇತ್ಯಾದಿಗಳನ್ನು ಖರೀದಿಸಲು ಬೆಳಿಗ್ಗೆ 6 ರಿಂದ 10 ರವರೆಗೆ ಅವಕಾಶ ಕಲ್ಪಿಸಿದೆ. ಆದರೆ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಳ್ಳಲು ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರನ್ನು ಪತ್ತೆಹಚ್ಚುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಈಗಾಗಲೆ ರಚಿಸಲಾಗಿದ್ದು, ಕಾಳದಂಧೆಕೋರರನ್ನು ಪತ್ತೆಹಚ್ಚಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ.