ನವದೆಹಲಿ: ಪಿಂಚಣಿದಾರರ ಅನುಕೂಲಕ್ಕಾಗಿ ಭವಿಷ್ಯ ನಿಧಿ ಸಂಸ್ಥೆ ಸಾಮಾನ್ಯ ಸೇವಾ ಕೇಂದ್ರಗಳನ್ನು ಬಳಸಲು ಅವಕಾಶ ನೀಡಿದೆ.
ಪಿಂಚಣಿದಾರರ ಮನೆಬಾಗಿಲಿಗೆ ಪಿಂಚಣಿ ಯೋಜನೆಯನ್ನು ತಲುಪಿಸುವ ಉದ್ದೇಶದಿಂದ ಕಾಮನ್ ಸರ್ವಿಸ್ ಸೆಂಟರ್ ಸಹಭಾಗಿತ್ವದಲ್ಲಿ ಡಿಜಿಟಲ್ ಜೀವನ್ ಪ್ರಮಾಣ ಪತ್ರ ಸಲ್ಲಿಕೆ ಸೌಲಭ್ಯ ಒದಗಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಸುಮಾರು 65 ಲಕ್ಷ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು 3.65 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ. ನೌಕರರ ಪಿಂಚಣಿ ಯೋಜನೆ ಇಪಿಎಸ್ ಪಿಂಚಣಿದಾರರ ಮನೆಬಾಗಿಲಿಗೆ ತರುವ ಉದ್ದೇಶದಿಂದ(ಕೊರೋನಾ ಸಾಂಕ್ರಾಮಿಕ ರೋಗ)ಸಂದರ್ಭದಲ್ಲಿ ಅನುಕೂಲ ಕಲ್ಪಿಸಲಾಗಿದೆ.
ಪ್ರತಿವರ್ಷ ತಮ್ಮ ಜೀವನ ಪ್ರಮಾಣ ಪತ್ರವನ್ನು ಪಿಂಚಣಿದಾರರು ಸಲ್ಲಿಸಬೇಕಿದೆ. ಸಾಮಾನ್ಯ ಸೇವಾ ಕೇಂದ್ರಗಳ ಜೊತೆಗೆ ಇಪಿಎಸ್ ಪಿಂಚಣಿದಾರರು 135 ಪ್ರಾದೇಶಿಕ ಕಛೇರಿಗಳು ಮತ್ತು ಜಿಲ್ಲಾ ಕಛೇರಿಗಳು ಮತ್ತು ಪಿಂಚಣಿ ವಿತರಿಸುವ ಬ್ಯಾಂಕುಗಳ ಮೂಲಕ ಪ್ರಮಾಣಪತ್ರವನ್ನು ಸಲ್ಲಿಸಬಹುದಾಗಿದೆ. ಸಲ್ಲಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಜೀವನ ಪ್ರಮಾಣಪತ್ರ ಮಾನ್ಯವಾಗಿರುತ್ತದೆ. ಇದಕ್ಕೆ ಮೊದಲು ಪಿಂಚಣಿದಾರರು ನವೆಂಬರ್ ತಿಂಗಳಲ್ಲಿ ಮಾತ್ರ ಪ್ರಮಾಣಪತ್ರವನ್ನು ಸಲ್ಲಿಸಬೇಕಿತ್ತು ಎಂದು ಹೇಳಲಾಗಿದೆ.