ನೌಕರರ ಭವಿಷ್ಯ ನಿಧಿ ಸಂಸ್ಥೆ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಈ ಹಿಂದೆ ಉದ್ಯೋಗಿಗಳಿಗೆ ಪಿಎಫ್ ಖಾತೆಯಲ್ಲಾದ ತಪ್ಪನ್ನು ಆನ್ಲೈನ್ ನಲ್ಲಿ ಸರಿಪಡಿಸಲು ಅವಕಾಶ ನೀಡಿತ್ತು. ಪಿಎಫ್ ಖಾತೆಯಲ್ಲಿ ಹೆಸರು, ತಂದೆಯ ಹೆಸರು ಮತ್ತು ಹುಟ್ಟಿದ ದಿನಾಂಕದಂತಹ ಮಾಹಿತಿಯನ್ನು ಆನ್ಲೈನ್ ಮೂಲಕವೇ ನವೀಕರಿಸಬಹುದಿತ್ತು. ಆದ್ರೀಗ ಇಪಿಎಫ್ಒ ಸಂಪೂರ್ಣ ಪ್ರಕ್ರಿಯೆಯನ್ನು ಬದಲಾಯಿಸಿದೆ.
ಇಪಿಎಫ್ಒ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪಿಎಫ್ ಖಾತೆಯಲ್ಲಾಗುವ ವಂಚನೆ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಪಿಎಫ್ಒ ಪ್ರಕಾರ ಇನ್ಮುಂದೆ ಕೆಲ ತಿದ್ದುಪಡಿಯನ್ನು ಆನ್ಲೈನ್ ನಲ್ಲಿ ಮಾಡಲು ಸಾಧ್ಯವಿಲ್ಲ. ಪ್ರೊಫೈಲ್ನಲ್ಲಿ ಹೆಸರನ್ನು ಬದಲಾಯಿಸಲು ಆನ್ಲೈನ್ ನಲ್ಲಿ ಸಾಧ್ಯವಿಲ್ಲ. ಅಗತ್ಯ ದಾಖಲೆಗಳೊಂದಿಗೆ ಇಪಿಎಫ್ಒ ಕಚೇರಿಗೆ ಹೋಗಬೇಕಾಗುತ್ತದೆ. ಜನ್ಮ ದಿನಾಂಕ, ತಂದೆಯ ಹೆಸರು, ಗಂಡನ ಹೆಸರು, ನಾಮಿನಿಯ ಹೆಸರು ಮತ್ತು ಉದ್ಯೋಗದಾತರ ಹೆಸರನ್ನು ಬದಲಾಯಿಸಲೂ ಸಾಧ್ಯವಿಲ್ಲ. ಈ ತಿದ್ದುಪಡಿಗೆ ಕಚೇರಿಗೆ ಹೋಗುವುದು ಅನಿವಾರ್ಯವಾಗಿದೆ.
ಉಪನಾಮದಲ್ಲಿ ಇನ್ಮುಂದೆ ಬದಲಾವಣೆ ಮಾಡಬಹುದು. ಮದುವೆಯ ನಂತರ ಮಹಿಳೆಯರ ಉಪನಾಮ ಬದಲಾಗುತ್ತದೆ. ಇದಕ್ಕಾಗಿ ಮಹಿಳೆಯರು ಮೊದಲು ತಮ್ಮ ಆಧಾರ್ ಕಾರ್ಡ್ನಲ್ಲಿ ಹೆಸರನ್ನು ಬದಲಾಯಿಸಬೇಕು. ಇದರ ನಂತರ ಮಾತ್ರ ಪಿಎಫ್ ಖಾತೆ ಪ್ರೋಫೈನ್ ನಲ್ಲಿ ತಿದ್ದುಪಡಿ ಮಾಡಬಹುದು.