ನವದೆಹಲಿ: ಕೊರೋನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದ ವೇಳೆ ಭವಿಷ್ಯನಿಧಿ ಖಾತೆದಾರರಿಗೆ ಭವಿಷ್ಯನಿಧಿ ಸಂಸ್ಥೆಯಿಂದ ಅನುಕೂಲವಾಗುವಂತೆ ಕ್ರಮಕೈಗೊಳ್ಳಲಾಗಿದೆ.
ಇಪಿಎಫ್ಒ ಖಾತೆಗಳಿಂದ ಹಣ ವಿತ್ ಡ್ರಾ ಮಾಡಿಕೊಳ್ಳುತ್ತಿರುವ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಪಿಎಫ್ಒ ಹಣ ವಿತ್ ಡ್ರಾ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದ್ದು ಖಾತೆದಾರರಿಗೆ ಶೀಘ್ರವಾಗಿ ಹಣ ಬಿಡುಗಡೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿದೆ.
ಈ ಹಿಂದೆ ಪಿಎಫ್ ಹಣ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಿತ್ತು. ಇತ್ತೀಚೆಗೆ 15 ದಿನದಲ್ಲಿ ಪಿಎಫ್ ಪಡೆಯುವ ವ್ಯವಸ್ಥೆ ಕಲ್ಪಿಸಿದ್ದು, ಈಗ ಅತ್ಯಾಧುನಿಕ ತಂತ್ರಜ್ಞಾನ ಹೊಸ ವ್ಯವಸ್ಥೆಯೊಂದಿಗೆ ಕೇವಲ 3-5 ದಿನಗಳ ಒಳಗೆ ಪಿಎಫ್ ಹಣ ಪಡೆದುಕೊಳ್ಳಬಹುದಾಗಿದೆ.
ಸಂಸ್ಥೆಯು ಪ್ರತಿದಿನ 80 ಸಾವಿರ ಖಾತೆದಾರರಿಗೆ ಹಣ ಬಿಡುಗಡೆ ಮಾಡುತ್ತಿದ್ದು, ಪ್ರತಿದಿನ ಸುಮಾರು 270 ಕೋಟಿ ರೂಪಾಯಿ ಹಣ ಖಾತೆದಾರರ ಕೈಸೇರುತ್ತಿದೆ. ಪಿಎಫ್ ಖಾತೆ ಹೊಂದಿದವರು https://unifiedportal-mem.epfindia.gov.in/memberinterface ಇಪಿಎಫ್ಒ ವೆಬ್ಸೈಟ್ ಓಪನ್ ಮಾಡಿ ಯುಎಎನ್ ನಂಬರ್ ಮತ್ತು ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಬೇಕು.
ಪಿಎಫ್ ಖಾತೆಗೆ ಸಂಬಂಧಿಸಿದ ಯುನಿಫೈಡ್ ಅಕೌಂಟ್ ನಂಬರ್ ಆಕ್ಟಿವೇಟ್ ಆಗಿರಬೇಕು. ಆಧಾರ್ ನಂಬರ್ ಮತ್ತು ಬ್ಯಾಂಕ್ ಖಾತೆ ಇದಕ್ಕೆ ಜೋಡಣೆಯಾಗಿರಬೇಕು. ಜಾಲತಾಣದಲ್ಲಿ ಜೋಡಣೆಗೆ ಅವಕಾಶ ಇದೆ. ವೆಬ್ಸೈಟ್ ನಲ್ಲಿ ಮ್ಯಾನೇಜ್ ಮೇಲೆ ಕ್ಲಿಕ್ ಮಾಡಿ ಫಾರ್ಮ್ ನಂ 31 ರಲ್ಲಿ ನಿಮ್ಮ ಪಿಎಫ್ ಹಣಕ್ಕೆ ಬೇಡಿಕೆ ಸಲ್ಲಿಸಬಹುದಾಗಿದೆ ಎನ್ನಲಾಗಿದೆ.