ನವದೆಹಲಿ: ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಫೆಬ್ರವರಿ 28 ರ ವರೆಗೆ ಗಡುವು ವಿಸ್ತರಿಸಿದೆ.
ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನವೆಂಬರ್ ನಲ್ಲಿ ಪ್ರಮಾಣ ಪತ್ರ ಸಲ್ಲಿಸಲು ಸಾಧ್ಯವಾಗದ 35 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ಅನುಕೂಲವಾಗಲಿದೆ. ನವೆಂಬರ್ ನಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸಲು ಸಾಧ್ಯವಾಗದವರು ಫೆಬ್ರವರಿ 28 ರ ವರೆಗೆ ಸಲ್ಲಿಕೆ ಮಾಡಬಹುದು.
ಪಿಂಚಣಿದಾರರಿಗೆ ಫೆಬ್ರವರಿವರೆಗೂ ಪ್ರತಿ ತಿಂಗಳು ಪಿಂಚಣಿ ಸಿಗಲಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ಪಿಂಚಣಿದಾರರಿಗೆ ಅನುಕೂಲವಾಗುವಂತೆ 2021 ರ ಫೆಬ್ರವರಿ 28 ರ ವರೆಗೆ ಕಾಲಮಿತಿಯನ್ನು ವಿಸ್ತರಿಸಿದೆ. ಜೀವನ್ ಪ್ರಮಾಣ ಪತ್ರವನ್ನು ಒಮ್ಮೆ ಸಲ್ಲಿಕೆ ಮಾಡಿದ ದಿನಾಂಕದಿಂದ ಒಂದು ವರ್ಷದ ಅವಧಿಯವರೆಗೆ ಮಾನ್ಯವಾಗಿರುತ್ತದೆ.
3.65 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು, ಪಿಂಚಣಿ ವಿತರಿಸುವ ಬ್ಯಾಂಕ್ ಶಾಖೆಗಳು, 1.36 ಲಕ್ಷ ಅಂಚೆ ಕಚೇರಿಗಳು, 1.90 ಲಕ್ಷ ಪೋಸ್ಟ್ ಮೆನ್ ಗಳು ಅಂಚೆ ಜಾಲ, ಮತ್ತು ಅಂಚೆ ಇಲಾಖೆಯ ಅಧೀನದಲ್ಲಿರುವ ಗ್ರಾಮೀಣ ಡಾಕ್ ಸೇವಕರು ಸೇರಿದಂತೆ ಹಲವು ಕಡೆ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.