ಪಿಎಫ್ ಹೊಂದಿರುವ ನೌಕರರಿಗೆ ನಿರಾಸೆ ಸುದ್ದಿಯೊಂದಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ 2020-21ರ ಆರ್ಥಿಕ ವರ್ಷಕ್ಕೆ ಪಿಎಫ್ ಠೇವಣಿಗಳ ಬಡ್ಡಿದರವನ್ನು ಮಾರ್ಚ್ 4 ರಂದು ಪ್ರಕಟಿಸುವ ನಿರೀಕ್ಷೆಯಿದೆ. ಈ ಬಡ್ಡಿ ದರ ಇಳಿಕೆಯಾಗಲಿದೆ ಎಂದು ಮೂಲಗಳು ಹೇಳ್ತಿವೆ.
ಶ್ರೀನಗರದಲ್ಲಿ ಕೇಂದ್ರ ಮಂಡಳಿಯ ಟ್ರಸ್ಟಿಗಳು ಸಭೆ ಸೇರಲಿದ್ದು, ಬಡ್ಡಿ ದರ ಪ್ರಕಟಿಸುವ ನಿರೀಕ್ಷೆಯಿದೆ. ವಿತ್ತ ವರ್ಷ 2020-21ನೇ ಸಾಲಿನಲ್ಲಿ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿಮೆಗೊಳಿಸುವ ಸಾಧ್ಯತೆ ಹೆಚ್ಚಿದೆ. ಕೊರೊನಾದಿಂದಾಗಿರುವ ಆರ್ಥಿಕ ಕುಸಿತ ಇದಕ್ಕೆ ಕಾರಣ ಎನ್ನಲಾಗ್ತಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಇಪಿಎಫ್ಒ,ಠೇವಣಿಗಳ ಮೇಲಿನ ಬಡ್ಡಿದರವನ್ನು ಏಳು ವರ್ಷಗಳ ಕನಿಷ್ಠ ಶೇಕಡಾ 8.5 ಕ್ಕೆ ಇಳಿಸಿತ್ತು. ಮಾರ್ಚ್ 31 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ತನ್ನ ಚಂದಾದಾರರಿಗೆ ಶೇಕಡಾ 8.5ರ ಬಡ್ಡಿಯನ್ನು ಎರಡು ಕಂತುಗಳಲ್ಲಿ ಪಾವತಿಸುವುದಾಗಿ ಮಂಡಳಿ ಹೇಳಿದೆ.
2018-19ರಲ್ಲಿ ಬಡ್ಡಿದರ ಶೇಕಡಾ 8.65ರಷ್ಟಿತ್ತು. ಇಪಿಎಫ್‌ಒ ತನ್ನ ಚಂದಾದಾರರಿಗೆ 2017-18ನೇ ಸಾಲಿನಲ್ಲಿ ಶೇಕಡಾ 8.55ರಷ್ಟು ಬಡ್ಡಿದರವನ್ನು ನೀಡಿತ್ತು. ಬಡ್ಡಿದರ 2016-17ರಲ್ಲಿ ಶೇಕಡಾ 8.65ರಷ್ಟಿತ್ತು. ಭವಿಷ್ಯ ನಿಧಿಗೆ ವಾರ್ಷಿಕ 2.5 ಲಕ್ಷಕ್ಕಿಂತ ಹೆಚ್ಚಿನ ಕೊಡುಗೆಯನ್ನು ನೀಡುವ ನೌಕರರ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2021 ರ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಏಪ್ರಿಲ್ 1ರಿಂದ ಹೊಸ ನೀತಿ ಜಾರಿಗೆ ಬರಲಿದೆ.