
ಇನ್ನು ಮುಂದೆ ದೇಶಾದ್ಯಂತ ಇರುವ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಕಪ್‌ಗಳ ಬದಲಾಗಿ ಮಣ್ಣಿನ ಕುಡಿಕೆಗಳಲ್ಲಿ ಚಹಾ ಪೂರೈಸಲಾಗುವುದು ಎಂದು ರೈಲ್ವೇ ಸಚಿವ ಪಿಯುಶ್ ಗೋಯೆಲ್ ಹೇಳಿದ್ದಾರೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಡಿಗಾವಾರಾ ರೈಲ್ವೇ ನಿಲ್ದಾಣದಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಗೋಯೆಲ್, ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ರೈಲ್ವೇ ಇಲಾಖೆಯಿಂದ ಈ ಕೊಡುಗೆ ಎಂದಿದ್ದಾರೆ.
“ದೇಶಾದ್ಯಂತ ಸುಮಾರು 400 ರೈಲ್ವೇ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಚಹಾ ಪೂರೈಕೆ ಮಾಡಲಾಗುವುದು. ಚಹಾವನ್ನು ಮಣ್ಣಿನ ಕುಡಿಕೆಗಳಲ್ಲೇ ಪೂರೈಕೆ ಮಾಡಬೇಕು ಎಂಬುದು ನಮ್ಮ ಪ್ಲಾನಿಂಗ್ ಆಗಿದೆ. ಇಂಥ ನಡೆಯಿಂದ ಬರೀ ಪರ್ಯಾವರಣ ಸಂರಕ್ಷಣೆಯಲ್ಲದೇ ಲಕ್ಷಾಂತರ ಜನರಿಗೆ ಉದ್ಯೋಗವನ್ನೂ ಕೊಡಮಾಡಲಿದೆ” ಎಂದು ಸಚಿವರು ತಿಳಿಸಿದ್ದಾರೆ.