ನವದೆಹಲಿ: ಕೌಟುಂಬಿಕ ಪಿಂಚಣಿಯನ್ನು ಅರ್ಜಿ ಸಲ್ಲಿಕೆಯಾದ ಒಂದು ತಿಂಗಳಲ್ಲಿ ನಿಗದಿ ಮಾಡಿ ಪಾವತಿಸಬೇಕೆಂದು ಕೇಂದ್ರ ಸರ್ಕಾರ ವತಿಯಿಂದ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ನಿವೃತ್ತಿ ವೇತನ ಪಡೆಯುವ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೀಡಲಾಗುವ ಕೌಟುಂಬಿಕ ಪಿಂಚಣಿಯನ್ನು ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ಖಾತ್ರಿ ಪಡಿಸಬೇಕು ಎಂದು ಪಿಂಚಣಿ ಇಲಾಖೆ ತಿಳಿಸಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(NPS) ಯಲ್ಲಿರುವ ನೌಕರರಿಗೂ ಈ ಆದೇಶ ಅನ್ವಯವಾಗಲಿದೆ. ಪಿಂಚಣಿಗೆ ಅರ್ಜಿ ಸಲ್ಲಿಸಿದ ಕೂಡಲೇ ಸಂಬಂಧಿತ ಕಚೇರಿ ಪ್ರಕ್ರಿಯೆ ಆರಂಭಿಸಿ ಕೌಟುಂಬಿಕ ಪಿಂಚಣಿ ನಿಗದಿ ಮಾಡಬೇಕೆಂದು ಹೇಳಲಾಗಿದೆ.
NPS ನೌಕರರ ವಿಷಯದಲ್ಲಿ PRAN ಖಾತೆಯನ್ನು ಮುಕ್ತಾಯಗೊಳಿಸಬೇಕು. ಸರ್ಕಾರ ನೀಡುವ ಪಾಲನ್ನು ನಿಲ್ಲಿಸುವ ಜೊತೆಗೆ ಮೊತ್ತವನ್ನು ಸರ್ಕಾರದ ಖಾತೆಗೆ ವರ್ಗಾಯಿಸುವಂತೆ ತಿಳಿಸಲಾಗಿದ್ದು, ಉಳಿಕೆ ಹಣವನ್ನು ನಾಮನಿರ್ದೇಶನ ವ್ಯಕ್ತಿಗೆ ಇಲ್ಲವೇ ಕಾನೂನುಬದ್ಧ ವಾರಸುದಾರರಿಗೆ ಇಡುಗಂಟು ರೂಪದಲ್ಲಿ ಕೊಡಬೇಕೆಂದು ಹೇಳಲಾಗಿದೆ.