ನವದೆಹಲಿ: ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ಪದ್ಧತಿ ಮುಂದಿನ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ನೂತನ ಕಾರ್ಮಿಕ ಸಂಹಿತೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸುವ ಸಾಧ್ಯತೆ ಇದ್ದು, ಇದು ಜಾರಿಯಾದಲ್ಲಿ ವಾರದಲ್ಲಿ ನಾಲ್ಕು ದಿನ ಕೆಲಸದ ಪದ್ದತಿ ಆಯ್ಕೆಗೆ ಅವಕಾಶ ಇರುತ್ತದೆ. ಉದ್ಯೋಗಿಗಳ ವೇತನದಲ್ಲಿ ಬದಲಾವಣೆಯಾಗುತ್ತದೆ. ನೌಕರರು ತಮಗೆ ಅನುಕೂಲವಾಗುವಂತೆ ವಾರದಲ್ಲಿ ನಾಲ್ಕು, ಐದು ಅಥವಾ ಆರು ದಿನಗಳ ಕೆಲಸದ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ವಾರದಲ್ಲಿ ಒಟ್ಟು 48 ಗಂಟೆಗಳ ಕೆಲಸ ಮಾಡುವುದು ಅಗತ್ಯವಾಗಿರುತ್ತದೆ. ಸರ್ಕಾರಿ, ಖಾಸಗಿ ಮತ್ತು ಸಂಘಟಿತ ವಲಯಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಹೇಳಲಾಗಿದೆ
ಜಪಾನ್, ನ್ಯೂಜಿಲೆಂಡ್, ಸ್ಪೇನ್ ಮೊದಲಾದ ದೇಶಗಳಲ್ಲಿ ವಾರಕ್ಕೆ ನಾಲ್ಕು ದಿನಗಳ ಮಾದರಿಯ ಕೆಲಸದ ಪದ್ಧತಿಯಿದೆ. ಕಾರ್ಮಿಕ ವಲಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ. 2022 -23ರಲ್ಲಿ ಕಾರ್ಮಿಕ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ಕನಿಷ್ಠ 13 ರಾಜ್ಯಗಳು ಕರಡು ನಿಯಮಗಳನ್ನು ಪ್ರಕಟಿಸಿವೆ. 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಾಗಿ ಸಂಯೋಜನೆ ಮಾಡಲಾಗಿದ್ದು, ವೇತನ, ಸಾಮಾಜಿಕ ಭದ್ರತೆ, ಕೈಗಾರಿಕೆ ಸಂಬಂಧ ಮತ್ತು ಔದ್ಯೋಗಿಕ ಸುರಕ್ಷತೆಯನ್ನು ಇದು ಒಳಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ, ಖಾಸಗಿ ವಲಯ, ಸಂಘಟಿತ ವಲಯಗಳಿಗೆ ಕಾರ್ಮಿಕರ ಸಂಹಿತೆ ಅನ್ವಯವಾಗಲಿದೆ.