ಪುಣೆ: ಹಣ್ಣುಗಳ ರಾಜ ಎಂದೇ ಹೆಸರಾಗಿರುವ ಮಾವಿನ ಹಣ್ಣು ದರ ಗಗನಕ್ಕೇರಿದೆ. ಮಾವಿನಹಣ್ಣಿನ ದರ ಭಾರಿ ಹೆಚ್ಚಾಗಿದ್ದು, ಖರೀದಿಸಲು ಜನಸಾಮಾನ್ಯರು ಹಿಂದೆ ಮುಂದೆ ನೋಡುವಂತಾಗಿದೆ.
ದೇವಗಡ ಮತ್ತು ರತ್ನಗಿರಿಯ ಅಲ್ಫೊನ್ಸೊ ಮಾವು ಚಿಲ್ಲರೆ ಮಾರುಕಟ್ಟೆಯಲ್ಲಿ ಡಜನ್ ಗೆ 800 ರಿಂದ 1,300 ರೂ.ವರೆಗೆ ಮಾರಾಟವಾಗುತ್ತಿದೆ. ಗ್ರಾಹಕರನ್ನು ಸೆಳೆಯಲು ವಿವಿಧ ತಂತ್ರಗಳನ್ನು ಅನುಸರಿಸುವ ವ್ಯಾಪಾರಿಗಳು ಈಗ ಮಾಸಿಕ ಕಂತು ಮೂಲಕ ಮಾವು ಖರೀದಿಸಲು ಅವಕಾಶ ಕಲ್ಪಿಸಿದ್ದಾರೆ.
ಪುಣೆಯ ಗುರುಕೃಪಾ ಟ್ರೇಡರ್ಸ್ ಅಂಡ್ ಫ್ರೂಟ್ ಪ್ರೊಡಕ್ಟ್ಸ್ ನವರು ಇಎಂಐನಲ್ಲಿ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದಾರೆ. 5,000 ರೂ.ವರೆಗೆ ಮಾವಿನ ಹಣ್ಣು ಖರೀದಿಸುವ ಗ್ರಾಹಕರಿಗೆ ಇಎಂಐ ಆಯ್ಕೆ ನೀಡಲಾಗಿದೆ. ಗ್ರಾಹಕರು ಕ್ರೆಡಿಟ್ ಕಾರ್ಡ್ ಬಳಸಿ ಮಾವಿನಹಣ್ಣು ಖರೀದಿಸಬೇಕಿದ್ದು, ಪಾವತಿ ಮೊತ್ತವನ್ನು ಮೂರು ತಿಂಗಳು, ಆರು ತಿಂಗಳು ಅಥವಾ 12 ತಿಂಗಳಾಗಿ ಪರಿವರ್ತಿಸಲಾಗುತ್ತದೆ. ಟಿವಿ, ಫ್ರಿಡ್ಜ್ ಮಾದರಿಯಲ್ಲಿ ಮಾಸಿಕ ಕಂತುಗಳಲ್ಲಿ ಮಾವಿನಹಣ್ಣು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.