ನವದೆಹಲಿ: ದೇಶದ ಅನೇಕ ರಾಜ್ಯಗಳಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡು ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಹಲವು ರಾಜ್ಯಗಳಲ್ಲಿ ಕಠಿಣ ನಿರ್ಬಂಧ ಹೇರಲಾಗಿದೆ.
ಇದರಿಂದಾಗಿ ಆರ್ಥಿಕ ಚಟುವಟಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ. ಈ ಕಾರಣದಿಂದ ಸಂಕಷ್ಟದಲ್ಲಿರುವ ಸಾಲಗಾರರಿಗೆ ಮೊರಾಟೋರಿಯಂ ಅಂತಹ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಕೊರೋನಾ ಕಾರಣದಿಂದ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಇಎಂಐ ಕಟ್ಟಲು ಕಷ್ಟವಾಗುತ್ತದೆ. ಅದೇ ರೀತಿ ಸಂಕಷ್ಟದಲ್ಲಿರುವ ಎಂಎಸ್ಎಂಇ ಗಳಿಗೆ ಆರ್ಥಿಕ ನೆರವು ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಸಾಲದ ಕಂತು ಮುಂದೂಡಿಕೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಬ್ಯಾಂಕಿಂಗ್ ಕ್ಷೇತ್ರದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಎಂಎಸ್ಎಂಇ ಮತ್ತು ಚಿಲ್ಲರೆ ವಿಭಾಗ ಸಂಕಷ್ಟಕ್ಕೆ ಸಿಲುಕಿದ್ದ ರೀತಿಯಲ್ಲಿ ಕಳೆದ ವರ್ಷದ ಪರಿಸ್ಥಿತಿಯೇ ಮುಂದುವರೆದಿದೆ. ಕಳೆದ ವರ್ಷ ಆರು ತಿಂಗಳ ಇಎಂಐ ಪಾವತಿ ಮುಂದೂಡಿಕೆ ಮಾಡಲಾಗಿತ್ತು. ಚಕ್ರಬಡ್ಡಿಗೆ ವಿನಾಯಿತಿ ನೀಡಲಾಗಿತ್ತು.